ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭಾ ಚುನಾವಣೆಗಾಗಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮತದಾರರಿಗಾಗಿ ಸಹಾಯವಾಣಿ ಕೇಂದ್ರವನ್ನು ಮಾರ್ಚ್ 16ರಿಂದ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮತದಾರರ ಪ್ರತಿ ಕರೆಗೆ ಮಾಹಿತಿಯುಕ್ತ ಪರಿಹಾರ ತಿಳಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಚುನಾವಣಾ ಕಂಟ್ರೋಲ್ ರೂಮ್ನಲ್ಲಿ ಆರಂಭಿಸಲಾಗಿರುವ ಈ ಸಹಾಯವಾಣಿ ಕೇಂದ್ರವು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ.
ಸಾರ್ವಜನಿಕರಿಂದ ಕರೆ ಸ್ವೀಕಾರಕ್ಕೆ ಒಟ್ಟು 6 ಸಿಬ್ಬಂದಿಗಳನ್ನು ಪ್ರತಿ 8 ಗಂಟೆಗಳಿಗೆ ಇಬ್ಬರಂತೆ ಕಾರ್ಯನಿರ್ವಹಿಸಲು ನೇಮಿಸಲಾಗಿದೆ. ಈ 6 ಸಿಬ್ಬಂದಿಗಳ ಮೇಲ್ವಿಚಾರಕರನ್ನಾಗಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಕೃಷಿ ವಿವಿಯ ಕುಲಸಚಿವೆ, ಹಿರಿಯ ಕೆಎಎಸ್ ಅಧಿಕಾರಿ ಜಯಲಕ್ಷ್ಮಿ ರಾಯಕೊಡ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಸಹಾಯವಾಣಿ ಕೇಂದ್ರಕ್ಕೆ 1950 ಟೋಲ್ ಫ್ರೀ ನಂಬರ್ನ ಸೌಕರ್ಯ ಕಲ್ಪಿಸಲಾಗಿದೆ. ಈ ದೂರವಾಣಿಯಲ್ಲಿ PRI(Priority Rate Interface) ಇದ್ದು, ಒಂದೇ ಸಲ ಹಲವು ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುತ್ತದೆ. ಜಿಲ್ಲೆಯ ಸೀಮೆಯೊಳಗೆ ವಾಸಿಸುವ ವ್ಯಕ್ತಿಗಳು ಜಿಲ್ಲೆಯ ಮತದಾರರ ಸಹಾಯವಾಣಿಗೆ ಕರೆ ಮಾಡಲು 1950 ಸಂಖ್ಯೆಯನ್ನು ಡಯಲ್ ಮಾಡಿದರೆ ಸಾಕು. ಲ್ಯಾಂಡಲೈನ್ ಇಲ್ಲವೆ ಯಾವುದೇ ಮೊಬೈಲ್ ಫೋನ್ನಿಂದ ಕರೆ ಮಾಡಬಹುದು. ಬೇರೆ ಜಿಲ್ಲೆಗಳಿಂದ ಅಥವಾ ಹೊರರಾಜ್ಯಗಳಿಂದ ಈ ಸಹಾಯವಾಣಿಗೆ ಕರೆ ಮಾಡಬೇಕಾದಲ್ಲಿ STD ಕೋಡನ್ನು ಉಪಯೋಗಿಸಿ 1950 ಡಯಲ್ ಮಾಡಬೇಕು.
ಸಾರ್ವಜನಿಕರಿಂದ ಮಾಹಿತಿ ಕೇಳಿ, ಮತದಾರರ ಕಾರ್ಡ್ಗೆ ಹೊಸ ಅರ್ಜಿ ಸಲ್ಲಿಸಿದ್ದು, ಯಾವಾಗ ಬರುತ್ತದೆ? ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸಿಗುತ್ತಿಲ್ಲ, ಮತದಾರರ ಕಾರ್ಡಲ್ಲಿ ಮಾಹಿತಿ ತಿದ್ದುಪಡಿ ಮಾಡಲು ಯಾವ ಫಾರಂ ತುಂಬಬೇಕು? ನಮ್ಮ ಭಾಗದ ಮತಗಟ್ಟೆ ಸಂಖ್ಯೆ ಎಷ್ಟು? ವಿಳಾಸ ಬದಲಾವಣೆ ಮಾಡಿಕೊಳ್ಳುವುದು ಹೇಗೆ? ಹೀಗೆ ಮತದಾರರ ಚೀಟಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳ ಕುರಿತಂತೆ ಫೋನ್ ಕರೆಗಳು ಸ್ವೀಕೃತವಾಗುತ್ತಿದ್ದು, ಸಹಾಯವಾಣಿ ಸಿಬ್ಬಂದಿಗಳು ಸೂಕ್ತ ಉತ್ತರ ನೀಡುತ್ತಿದ್ದಾರೆ.
ಈ ರೀತಿ ಬರುವ ಕರೆಗಳಲ್ಲಿ ಯುವ ಮತದಾರರ ಕರೆಗಳೇ ಹೆಚ್ಚಾಗಿವೆ. ಅದರಲ್ಲೂ ಗ್ರಾಮೀಣ ಯುವ ಮತದಾರರಿಂದ ಅತಿ ಹೆಚ್ಚು ಕರೆಗಳು ಸ್ವೀಕಾರವಾಗುತ್ತಿವೆ. ಮತದಾರರ ನೋಂದಣಿ, ರದ್ದುಪಡಿಸುವಿಕೆ, ಸ್ಥಳಾಂತರ ಕುರಿತ ಫಾರಂ 6, 7, 8 ಕುರಿತಂತೆ ಕರೆಗಳಿಗೂ ಕೂಡ ಮಾಹಿತಿ ಪಡೆದು ಉತ್ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ರೀತಿ ಕರೆಗಳ ಜೊತೆ ಚುನಾವಣೆಗೆ ಸಂಬಂಧಿಸಿದ ದೂರುಗಳಿಗೂ ಉತ್ತರಿಸಲಾಗುತ್ತಿದೆ. ಈ ದೂರುಗಳನ್ನು ಎನ್ಜಿಆರ್ಎಸ್ (NGRS) ಮತ್ತು ಪಿ.ಜಿ.ಆರ್.ಎಸ್ (PGRS) ಪೋರ್ಟಲ್ಗಳ ಮೂಲಕ ಸ್ವೀಕೃತಗೊಳ್ಳುತ್ತಿವೆ. ದೂರು ಸ್ವೀಕರಿಸಿದ ನಂತರ 24ರಿಂದ 48 ಗಂಟೆಗಳ ಒಳಗಡೆ ಪ್ರತಿ ದೂರಿಗೆ ಸಂಬಂಧಿತ ಇಲಾಖೆಯಿಂದ ಮಾಹಿತಿ ಪಡೆದು ನಂತರ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳ ಸ್ಪಷ್ಟ ಅಭಿಪ್ರಾಯದೊಂದಿಗೆ ಚುನಾವಣಾ ಆಯೋಗದ ಈಮೇಲ್ cmc.ceo.f@gmail.com ಗೆ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.