ಬೆಂಗಳೂರು:-ಕರ್ನಾಟಕ ಸರ್ಕಾರದಿಂದ ನಟ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸಾಹಸ ಸಿಂಹ ಖ್ಯಾತಿಯ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ವಿಷ್ಣುವರ್ಧನ್ ಅಭಿಮಾನಿಗಳ ಬಹು ವರ್ಷದ ಬೇಡಿಕೆಗೆ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸಿದೆ. ಇತ್ತೀಚೆಗಷ್ಟೆ ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋ ನೆಲಸಮವಾಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು. ಆದರೆ ಇದೀಗ ಸಿದ್ದರಾಮಯ್ಯ ಸರ್ಕಾರ, ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಿದ್ದು, ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ. ವಿಷ್ಣುವರ್ಧನ್ ಮಾತ್ರವೇ ಅಲ್ಲದೆ ಕನ್ನಡದ ಮತ್ತೊಬ್ಬ ಲೆಜೆಂಡರಿ ನಟಿ ಬಿ ಸರೋಜಾ ದೇವಿ ಅವರಿಗೂ ಸಹ ಕರ್ನಾಟಕ ರತ್ನವನ್ನು ಘೋಷಣೆ ಮಾಡಲಾಗಿದೆ. ಇಬ್ಬರು ಮೇರು ನಟರಿಗೆ ಒಂದೇ ದಿನ ಕರ್ನಾಟಕ ರತ್ನ ಘೋಷಣೆ ಆಗಿದೆ.
ಈ ಹಿಂದೆ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಿರಿಯ ನಟಿಯವರು ಮನವಿ ಮಾಡಿದ್ರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ನಟ ವಿಷ್ಣುವರ್ಧನ್, ನಟಿ ಬಿ ಸರೋಜಾ ದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಅವರು ಸುದ್ದಿಗೋಷ್ಟಿಯ ಮೂಲಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ಯಾವಾಗ, ಎಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ.
ಅಳಿಯ ಅನಿರುದ್ಧ್ ಹೇಳಿದ್ದೇನು?
ರಾಜ್ಯ ಸರ್ಕಾರ ಕರ್ನಾಟಕ ರತ್ನ ನೀಡಿರುವ ಬಗ್ಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ಅವರು ಮಾತನಾಡಿ, ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಪ್ಪಾಜಿಗೆ ಕರ್ನಾಟಕ ರತ್ನ ಘೋಷಿಸಿದ್ದಕ್ಕೆ ಖುಷಿ ಆಯಿತು. ಅಪ್ಪಾಜಿಯವರು ಈ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು. ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಕನ್ನಡ ಚಿತ್ರರಂಗದ ಎಲ್ಲ ಕಲಾವಿದರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.


