ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ನಿಯಂತ್ರಣ ತರಲು ಮಹತ್ವದ ತೀರ್ಮಾನ ಕೈಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ನಡೆಸದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಅಥವಾ ಧಾರ್ಮಿಕ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಪೂರ್ವಾನುಮತಿ ಕಡ್ಡಾಯ ಎಂದು ಸರ್ಕಾರ ನಿರ್ಧರಿಸಿದೆ.
ಸರ್ಕಾರ ಈ ತೀರ್ಮಾನದಲ್ಲಿ ಆರ್ಎಸ್ಎಸ್ ಎಂಬ ಪದವನ್ನು ನೇರವಾಗಿ ಬಳಸದೆ, “ಖಾಸಗಿ ಸಂಘ ಸಂಸ್ಥೆಗಳು” ಎಂಬ ಉಲ್ಲೇಖದ ಮೂಲಕ ಪರೋಕ್ಷವಾಗಿ ಕಡಿವಾಣ ಹಾಕಿದೆ. ಈ ಕ್ರಮವು 2013ರ ಬಿಜೆಪಿ ಸರ್ಕಾರದ ಹಳೆಯ ಆದೇಶ ಮತ್ತು ತಮಿಳುನಾಡು ಸರ್ಕಾರದ ಮಾದರಿಯನ್ನು ಅನುಸರಿಸಿದೆ.
ಹೊಸ ನಿಯಮ ಜಾರಿಗೆ ಬಂದರೆ, ಸರ್ಕಾರಿ ಜಾಗ, ಶಾಲೆ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಖಾಸಗಿ ಅಥವಾ ಧಾರ್ಮಿಕ ಕಾರ್ಯಕ್ರಮ ಮಾಡಲು ಮೊದಲು ಸರ್ಕಾರದಿಂದ ಅನುಮತಿ ಪಡೆಯಲೇಬೇಕು.
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಸಂಸ್ಥೆ ಅಥವಾ ಧರ್ಮದವರು ಸರ್ಕಾರಿ ಸ್ಥಳದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಕಾನೂನಾತ್ಮಕವಾಗಿ ಅನುಮತಿ ಪಡೆಯಬೇಕು. ಇದು ಎಲ್ಲರಿಗೂ ಒಂದೇ ನಿಯಮ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ತೊಂದರೆ ಇಲ್ಲ ಎಂದು ಹೇಳಿದ್ದಾರೆ.