ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ₹27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ 3-4 ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ನೀರಾವರಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಡ ಬಿತ್ತನೆ ಕುರಿತು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ. ನೀರಾವರಿ ಇಲಾಖೆ ಮೂಲಕವೇ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗುವುದು. ಈ ಸಂಬಂಧ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಮಾನಿಟರಿಂಗ್ ಕಮಿಟಿ ಹಾಗೂ ತಾಂತ್ರಿಕ ಸಮಿತಿ ರಚನೆ ಮಾಡಲಾಗುವುದು. ಈ ಕುರಿತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದು, ಇಂದೇ ಸಮಿತಿ ರಚನೆಯಾಗಲಿದೆ. ಸಮಿತಿಯಿಂದ ವರದಿ ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
4 ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ
ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ ನಡೆಸಲಾಗುವುದು. ಎಲ್ಲಿ ಮೋಡಗಳ ಲಭ್ಯತೆ ಇರುತ್ತದೆಯೋ, ಅಲ್ಲಿಯೇ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.
ಕ್ಲೌಡ್ ಅಸೆಸ್ಮೆಂಟ್ ಪ್ರಕಾರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ವರೆಗೂ ಮೋಡಗಳ ಲಭ್ಯತೆ ಇರುವ ನಿರೀಕ್ಷೆಯಿದೆ. ಮೋಡ ಬಿತ್ತನೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಕಳೆದ ವರ್ಷ ಶೇ.20ರಷ್ಟು ಯಶಸ್ಸು
ಕಳೆದ ವರ್ಷ ನಡೆದ ಮೋಡ ಬಿತ್ತನೆ ಪ್ರಯೋಗದಲ್ಲಿ ಸುಮಾರು ಶೇ.20ರಷ್ಟು ಯಶಸ್ಸು ದೊರೆತಿತ್ತು. ಈ ಬಾರಿ ಕನಿಷ್ಠ ಶೇ.30ರಷ್ಟು ಯಶಸ್ಸು ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಮೂರು ಬಾರಿ ಮೋಡ ಬಿತ್ತನೆ ಪ್ರಯೋಗ ನಡೆಸಲಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರಿಂದಲೂ ಮೋಡ ಬಿತ್ತನೆ ನಡೆಸುವಂತೆ ಒತ್ತಡವಿದೆ. ಬರ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆಯಿಂದ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
₹27 ಕೋಟಿ ವೆಚ್ಚದಲ್ಲಿ 60 ಗಂಟೆಗಳ ಆಧಾರದ ಮೇಲೆ ಮೋಡ ಬಿತ್ತನೆ ಕಾರ್ಯ ನಡೆಸಲಾಗುವುದು. ಯಶಸ್ಸಿನ ಪ್ರಮಾಣ ಕಡಿಮೆಯಿದ್ದರೂ ರೈತರ ಹಿತದೃಷ್ಟಿಯಿಂದ ಈ ಪ್ರಯೋಗ ಕೈಗೊಳ್ಳಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.



