ಬೆಂಗಳೂರು: ಒಂದು ಸಿನಿಮಾ ನೂರು ದಿನ ಪೂರೈಸಿದರೆ ಬಾಕ್ಸ್ ಆಫೀಸ್ ಕಲೆಕ್ಷನ್ನೊಂದಿಗೆ ಸಂಭ್ರಮಿಸಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಆಡಳಿತದಲ್ಲಿ ಒಂದೇ ಒಂದು ಉತ್ತಮ ಯೋಜನೆ ಕಾಣುತ್ತಿಲ್ಲ. ಬದಲಾಗಿ ಹಗರಣಗಳನ್ನೇ ನೀಡಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆ ಏನು ಎಂದು ಪ್ರಶ್ನಿಸಿದರು. ‘ಭಾರತ್ ಜೋಡೋ’ ಹೆಸರಿನಲ್ಲಿ ಕಾಂಗ್ರೆಸ್ ಬೂತ್ ಕಮಿಟಿಗಳಿಗೆ ತಲಾ ₹10 ಲಕ್ಷ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದು, ಜನಸಾಮಾನ್ಯರ ತೆರಿಗೆ ಹಣವನ್ನು ಈ ರೀತಿಯಾಗಿ ಬಳಸುವುದು ದೊಡ್ಡ ದ್ರೋಹ ಎಂದು ಆರೋಪಿಸಿದರು.
ಸರ್ಕಾರ ಘೋಷಣೆ ಮಾಡಿ ಶೋಷಣೆ ಮಾಡುವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಪಾರ್ಕ್ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿತ್ತು. ಆದರೆ, ಬಿಜೆಪಿ ಹಾಗೂ ವಿಪಕ್ಷಗಳ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಮತ್ತು ಸಚಿವರ ‘ವಿಕೆಟ್’ ಬೀಳುವ ಆತಂಕದಿಂದ ಸದನದಲ್ಲಿ ಮಂಜೂರಾಗಿದ್ದ ಮಸೂದೆಯನ್ನೂ ಸರ್ಕಾರ ವಾಪಸ್ ಪಡೆದಿದೆ ಎಂದು ಆರೋಪಿಸಿದರು.
ಬಿಡಿಎ, ಹೌಸಿಂಗ್ ಬೋರ್ಡ್ ಹಾಗೂ ಕೆಐಎಡಿಬಿಯಲ್ಲಿ ಪಾರ್ಕ್ಗಳಿಗೆ ಮೀಸಲಾದ ಜಾಗವನ್ನು ಉಳಿಸದೆ, ತಮಗೆ ಇಷ್ಟ ಬಂದಂತೆ ನಿವೇಶನಗಳಾಗಿ ಪರಿವರ್ತಿಸಿ ಹಂಚಿಕೆ ಮಾಡಲಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.
ಕೆಐಎಡಿಬಿಯಲ್ಲಿ ಪಾರ್ಕ್ ಇರುವ ಜಾಗವನ್ನೇ ಲೇಔಟ್ ನಕ್ಷೆಯಲ್ಲಿ ಬದಲಾವಣೆ ಮಾಡಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಚುನಾವಣಾ ದೇಣಿಗೆ ಸಂಗ್ರಹದ ಉದ್ದೇಶದಿಂದ ಖಾತೆಗಳನ್ನು ಬದಲಾಯಿಸಲಾಗುತ್ತಿದೆ ಎಂದು ದೂರಿದ ಅವರು, ಬಿಡಿಎ, ಪವರ್ ಕಾರ್ಪೊರೇಷನ್ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಗೃಹ ಸಚಿವರು ಆರ್ಎಸ್ಎಸ್ ಅನ್ನು ಟೀಕಿಸುವುದರಲ್ಲೇ ಮಗ್ನರಾಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಕೆಲವು ಪೊಲೀಸ್ ಠಾಣೆಗಳು, ಅದರಲ್ಲೂ ವೈಟ್ಫೀಲ್ಡ್ ಠಾಣೆಯಂತಹ ಠಾಣೆಗಳು ರಿಯಲ್ ಎಸ್ಟೇಟ್ ದಂಧೆಯ ಕೇಂದ್ರಗಳಾಗಿವೆ ಎಂದು ಆರೋಪಿಸಿದ ಅವರು, ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲೇ ಪಂಚಾಯಿತಿ ನಡೆಸುವ ಅಕ್ರಮ ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ದೂರಿದರು.
ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಪ್ರಕರಣಗಳು ನಡೆಯುತ್ತಿದ್ದರೂ ಗಮನ ಹರಿಸದ ನಾಯಕರಿಗೆ ಕನಿಷ್ಠ ಮೂರು ನಿಮಿಷದ ‘ವಂದೇ ಮಾತರಂ’ ಹಾಡಲು ಕೂಡ ಸಮಯವಿಲ್ಲ ಎಂದು ವ್ಯಂಗ್ಯವಾಡಿದರು. ಈಗಿನ ಗೃಹ ಸಚಿವರನ್ನು ಆರ್ಎಸ್ಎಸ್ ಉಸ್ತುವಾರಿ ಸಚಿವರನ್ನಾಗಿ ಮಾಡಿ, ಬೇರೊಬ್ಬರನ್ನು ಗೃಹ ಸಚಿವರನ್ನಾಗಿ ನೇಮಿಸಬೇಕು ಎಂದು ಅವರು ಆಗ್ರಹಿಸಿದರು.



