ವಿಜಯಸಾಕ್ಷಿ ಸುದ್ದಿ, ಡಂಬಳ: ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಬಾನು ಮುಸ್ತಾಕ್ ಅವರು ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದುಕೊಡುವ ಮೂಲಕ ನಾಡಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಇವರು ದಸರಾ ಉದ್ಘಾಟನೆ ಮಾಡುತ್ತಿರುವುದು ದಸರಾ ಸಾಂಸ್ಕೃತಿಕ ಉತ್ಸವಕ್ಕೆ ಗರಿಮೆಯಾಗಿದೆ. ಇದನ್ನು ಸಹಿಸದ ಮಾಜಿ ಸಂಸದ ಪ್ರತಾಪ್ ಸಿಂಹ ರಾಜಕೀಯ ಹಿನ್ನೆಲೆಯಲ್ಲಿ ವಿರೋಧಿಸುತ್ತಿದ್ದಾರೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ವಾಸಿಸುತ್ತಿರುವ ಎಲ್ಲಾ ಜಾತಿಯ ಜನರು ಭಾರತೀಯರೇ. ಹೀಗಾಗಿ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವುದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕನ್ನಡದ ಲೇಖಕಿಯಾಗಿ ಬಾನು ಮುಸ್ತಾಕ್ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸುವ ಕೆಲಸ ಮಾಡುತ್ತಿರುವವರಿಂದ ದಸರಾ ಉದ್ಘಾಟಿಸಲು ಸರ್ಕಾರ ನಿರ್ಧಾರ ಮಾಡಿರುವುದು ಸೂಕ್ತವಾಗಿದೆ. ಆದರೆ ಪ್ರತಿ ಬಾರಿಯೂ ವಿರೋಧ ಪಕ್ಷಗಳು ಆಡಳಿತ ಪಕ್ಷ ಏನೇ ಮಾಡಿದರೂ ವಿರೋಧ ಮಾಡುವುದು ಸಹಜ ಎಂದು ಟೀಕಿಸಿದರು.
ಬಿಜೆಪಿಯ ಮಹಿಳಾ ವಿರೋಧಿ ಭಾವನೆಯನ್ನು ಇದು ತೋರಿಸುತ್ತದೆ. ಮೈಸೂರಿನ ಇತಿಹಾಸ ಅರಿಯದ ಪ್ರತಾಪ್‌ಸಿಂಹ ಹಾಗೂ ಬಿಜೆಪಿಯವರು ಜನರ ಭಾವನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್. ಕೊರ್ಲಹಳ್ಳಿ, ಬಸುರಡ್ಡಿ ಬಂಡಿಹಾಳ, ಮರಿಯಪ್ಪ ಸಿದ್ದಣ್ಣವರ, ಬಸುರಾಜ ಪೂಜಾರ, ಮಹೇಶ ಗಡಗಿ, ಮಹೇಶ ಕೊರ್ಲಹಳ್ಳಿ, ಗೌಸಿದ್ದಪ್ಪ ಬಿಸನಳ್ಳಿ, ಬಾಬು ಮೂಲಿಮನಿ, ಅನಿಲ ಪಲ್ಲೇದ, ಮುತ್ತಣ್ಣ ಕೊಂತಿಕಲ್ಲ, ಮಾರುತಿ ಹೊಂಬಳ, ಸಿದ್ದಲಿಂಗಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಪ್ಯಾಟಿ ಇದ್ದರು.
ಬಿಜೆಪಿ ಎಂದೂ ನಾಡಿನ ಹಿತಾಸಕ್ತಿಗಾಗಿ ಇಲ್ಲಿನ ಜನರ ಪರವಾಗಿಲ್ಲ. ಬದಲಾಗಿ ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವುದು ಇವರ ಕೆಲಸ. ದಸರಾ ಉದ್ಘಾಟನೆ ವಿಚಾರದಲ್ಲೂ ಇವರು ಅದನ್ನೇ ಮಾಡುತ್ತಿದ್ದಾರೆ. ಮೈಸೂರು ಮಹಾರಾಜರು ಸರ್ವಧರ್ಮ ಸಹಿಷ್ಣುಗಳಾಗಿದ್ದವರು. ಆದರೆ ರಾಜವಂಶದ ಬಗ್ಗೆ ಜನರಿಗಿರುವ ಗೌರವ ಭಾವನೆಯನ್ನು ಕೆಡಿಸುತ್ತಿರುವುದು ಬಿಜೆಪಿ ಹಾಗೂ ಪ್ರತಾಪ್ ಸಿಂಹ ಅವರ ಹೀನ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.