ಬೆಂಗಳೂರು: ಮೈಸೂರು–ಫಂಡರಾಪುರ ನಡುವೆ ಸಂಚರಿಸುವ ಪ್ರಮುಖ ರೈಲು ಸೇವೆಯಾದ ಗೋಲಗುಂಬಜ್ ಎಕ್ಸ್‌ಪ್ರೆಸ್‌ಗೆ ರೈಲ್ವೆ ಮಂಡಳಿ ಮಹತ್ವದ ಅನುಮೋದನೆ ನೀಡಿದೆ. ಇನ್ನು ಮುಂದೆ ಈ ರೈಲು ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸಲಿದ್ದು, ಪ್ರಯಾಣಿಕರಿಗೆ ವೇಗ ಹಾಗೂ ಅನುಕೂಲ ಹೆಚ್ಚಲಿದೆ.
ರೈಲ್ವೆ ಮಂಡಳಿಯ ಈ ನಿರ್ಧಾರದಿಂದ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ದೀರ್ಘಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಬೈಪಾಸ್ ಮಾರ್ಗದ ಅನುಮೋದನೆಗಾಗಿ ಹಲವು ಬಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯ ಪ್ರಕಾರ, ಗೋಲಗುಂಬಜ್ ಎಕ್ಸ್‌ಪ್ರೆಸ್ ಈಗ ಹುಬ್ಬಳ್ಳಿ ಹಾಗೂ ಗದಗ ನಗರಗಳ ಒಳನಿಲ್ದಾಣಗಳಿಗೆ ಪ್ರವೇಶಿಸುವುದಿಲ್ಲ. ಬದಲಾಗಿ ಹುಬ್ಬಳ್ಳಿ ದಕ್ಷಿಣ ಹಾಗೂ ಗದಗ ಬೈಪಾಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುವುದು. ಇದರಿಂದ ರೈಲು ಸಂಚಾರ ಹೆಚ್ಚು ಸುಗಮವಾಗಲಿದ್ದು, ಪ್ರಯಾಣ ಅವಧಿ ಸುಮಾರು 55 ನಿಮಿಷ ಕಡಿಮೆಯಾಗಲಿದೆ.
ಸಚಿವರ ಪ್ರಕಾರ, ಬೈಪಾಸ್ ಮಾರ್ಗ ಜಾರಿಗೆ ಬಂದ ನಂತರ ಮೈಸೂರು–ಫಂಡರಾಪುರ ನಡುವೆ ಪ್ರಯಾಣದ ಸಮಯದಲ್ಲಿ ಗಣನೀಯ ಉಳಿತಾಯವಾಗಲಿದೆ. ಹೊಸ ವೇಳಾಪಟ್ಟಿಯಂತೆ, ಮೈಸೂರಿನಿಂದ ಮಧ್ಯಾಹ್ನ 3:50ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 10:05ಕ್ಕೆ ಫಂಡರಾಪುರ ತಲುಪಲಿದೆ. ಫಂಡರಾಪುರದಿಂದ ಮಧ್ಯಾಹ್ನ 1:15ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 11:30ಕ್ಕೆ ಮೈಸೂರು ತಲುಪಲಿದೆ.
ಇದಲ್ಲದೆ, ವಿಜಯಪುರ–ಬೆಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಸೇವೆಯಾಗಿ ಪರಿವರ್ತಿಸುವಂತೆ ಸಚಿವರು ರೈಲ್ವೆ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ನಿರ್ಧಾರದಿಂದ ಉತ್ತರ ಕರ್ನಾಟಕದ ರೈಲು ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.



