ವಿಜಯಸಾಕ್ಷಿ ಸುದ್ದಿ, ಹಾವೇರಿ: ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆಯ ಆಂತರಿಕ ಗೊಂದಲದಿನ್ದ ರಾಜ್ಯದ ಆಡಳಿತ ಕುಂಠಿತವಾಗಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟತೆ ಇಲ್ಲದಿರುವುದರಿಂದ ರಾಜ್ಯದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಅಧಿಕಾರ ಹಸ್ತಾಂತರ ವಿಚಾರ ಚಾಲ್ತಿಯಲ್ಲಿದೆ. ಸಿ.ಎಂ ಕಡೆಯವರು ಅವರೇ 5 ವರ್ಷ ಮುಂದುವರೆಯುತ್ತಾರೆ ಎಂದರೆ, ಡಿ.ಕೆ. ಶಿವಕುಮಾರ್ ಕಡೆಯವರು ಡಿ.ಕೆ.ಶಿ ಸಿ.ಎಂ ಆಗುತ್ತಾರೆ ಎನ್ನುತ್ತಾರೆ. ಆದರೆ, ಹೈಕಮಾಂಡ್ ಇದರಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಅಲ್ಲಿಯೂ ಎರಡು ಗುಂಪುಗಳಾಗಿವೆ. ಇದು ಅವರ ಆತಂರಿಕ ಸಮಸ್ಯೆ. ಇವರ ಆತಂರಿಕ ಸಮಸ್ಯೆಯಿಂದ ರಾಜ್ಯದ ಆಡಳಿತ ಸ್ಥಗಿತವಾಗಿದೆ. ಮುಂದೆ ಏನಾಗುತ್ತೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು ಎಂದರು.
ಶಾಸಕ ಕೆ.ಸಿ. ವಿರೇಂದ್ರ ಪಪ್ಪಿಯಿಂದ ಬಿಹಾರ ಚುನಾವಣೆಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಡಿ ಸುದೀರ್ಘ ತನಿಖೆ ನಡೆಸುತ್ತಿದೆ. ಕೆ.ಸಿ. ವೀರೆಂದ್ರಗೆ ಈ ಹಣ ಎಲ್ಲಿಂದ ಬಂತು ಎಂದು ತನಿಖೆ ಮಾಡುತ್ತಿದೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಇಂದಿರಾ ಕಿಟ್ ಕೊಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದಿಂದ ಹತ್ತು ಕೆಜಿ ಅಕ್ಕಿ, ಕೇಂದ್ರದಿನ್ದ ಐದು ಕೆಜಿ ಅಕ್ಕಿ ಸೇರಿ ಹದಿನೈದು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಅವರ ಬಳಿ ಅಕ್ಕಿ ಕೊಡಲು ಹಣವಿಲ್ಲದಿರುವುದರಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜಕೀಯ ಲಾಭಕ್ಕೆ ಜಿಬಿಎ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಬಿಜೆಪಿ ನಾಯಕರು ಗೈರಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಗ್ರೇಟರ್ ಬೆಂಗಳೂರು ಮಾಡಿದ್ದು ರಾಜಕೀಯ ಲಾಭಕ್ಕಾಗಿ. ಕೆಲವು ಕ್ಷೇತ್ರಗಳನ್ನು ವಿಂಗಡನೆ ಮಾಡಿ, ಅದರಲ್ಲೂ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರಗಳನ್ನು ಒಡೆದು, ಮೀಸಲಾತಿ ಲಾಭ ಪಡೆಯುವದಕ್ಕೆ ಗ್ರೇಟರ್ ಬೆಂಗಳೂರು ಮಾಡಿದ್ದಾರೆ. ಇದರಿಂದ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ, ಇದರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದರು.