ಬೆಂಗಳೂರು: ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಚಿತ್ತಾಪುರ RSS ಪಥಸಂಚಲನಕ್ಕೆ ಕಲಬುರಗಿ ಜಿಲ್ಲಾಡಳಿತ ಅನುಮತಿ ನೀಡಿದ್ದು, ಒಟ್ಟು 325 ಜನರು ಮಾತ್ರ ಭಾಗಿಯಾಗಲು ಅವಕಾಶ ನೀಡಿರೋದಾಗಿ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ. ಆರ್ಎಸ್ಎಸ್ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ. ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ RSS ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಕಿಡಿಕಾರಿದ್ದಾರೆ.
ಯಾವುದೇ ಸಂಘಗಳು, ವ್ಯಕ್ತಿಗಳು ಇದನ್ನು ಅರ್ಥೈಸಿಕೊಂಡು ನೀತಿ, ನಿಯಮಗಳಿಗೆ ಬದ್ಧರಾಗಿ ನಡೆಯಬೇಕು. ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತ ರೂಪಿಸಿರುವ ಮಾನದಂಡಗಳನ್ನು ಒಪ್ಪಿ, ನಿಯಮಗಳಿಗೆ ಅನುಸಾರವಾಗಿ ಆರ್ಎಸ್ಎಸ್ ತಮ್ಮ ಕಾರ್ಯಕ್ರಮ ನಡೆಸಬೇಕು ಇದರ ಹೊರತಾಗಿ ಯಾವುದೇ ಅತಿ ಬುದ್ದಿವಂತಿಕೆಗೂ ಅವಕಾಶವಿಲ್ಲ ಎಂದಿದ್ದಾರೆ.


