ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಂಗ್ರೆಸ್ ಪಕ್ಷ ಬಡವರಿಗಾಗಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಟೀಕೆ ಮಾಡಿ, ಬಡವರನ್ನು ಹೀಯಾಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಆರೋಪಿಸಿದರು.
ಅವರು ಎಪಿಎಮ್‌ಸಿ ಯಾರ್ಡ್ನಲ್ಲಿ ಕೂಲಿಕಾರ್ಮಿಕರು ಮತ್ತು ಹಮಾಲರ ಸಂಘದ ಸದಸ್ಯರನ್ನು ಉದ್ದೇಶಿಸಿ ಹಾವೇರಿ ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ, ಧರ್ಮ, ಪಕ್ಷದವರಿಗೂ ಅನ್ವಯಿಸುತ್ತವೆ. ಗ್ಯಾರಂಟಿ ಯೋಜನೆಗಳನ್ನು ಟೀಕೀಸುವ ಮೊದಲು ಬಡವರಿಗೆ, ನೊಂದವರಿಗೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಶ್ರಮಿಕರ, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಪಡಗೇರಿ ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಗಳನ್ನು ಮನೆ ಮನೆಗೂ ಹೇಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಜಣ್ಣ ಹೊಳಲಾಪುರ, ನೀಲಪ್ಪ ಪೂಜಾರ, ಶರಣು ಗೋಡಿ, ಕಿರಣ ನವಲೆ, ಎಪಿಎಮ್‌ಸಿ ಹಮಾಲರ ಸಂಘದ ಅಧ್ಯಕ್ಷ ಮುದಕಣ್ಣ ಗದ್ದಿ, ಸಂತೋಷ ಚಕ್ರಸಾಲಿ, ಲೆಂಕೆಪ್ಪ ಶೆರಸೂರಿ, ಮಲ್ಲಪ್ಪ ಗದ್ದಿ, ನೀಲಪ್ಪ ಶೆರಸೂರಿ, ನಿಂಗಪ್ಪ ಶೆರಸೂರಿ ಸೇರಿದಂತೆ ಕಾರ್ಮಿಕ ಮುಖಂಡರು, ಕೂಲಿ ಕಾರ್ಮಿಕರ ಇದ್ದರು.