ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅರ್ಹರಿಗೆ ಯೋಜನೆಗಳ ಸೌಲಭ್ಯ ಸುಲಭವಾಗಿ ತಲುಪಲು ಅಧಿಕಾರಿ ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಗುರುವಾರ ತಾಲೂಕಾ ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಸೆಪ್ಟೆಂಬರ್ ೧೯ರಂದು ಜಿಲ್ಲಾಡಳಿತದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಸಚಿವರ ಸೂಚನೆಯಂತೆ ತಾಲೂಕಾ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆಗೆ ಸಮಿತಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿದ್ದರು. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಅರ್ಹರಿಗೆ ಗ್ಯಾರಂಟಿ ಸೌಲಭ್ಯ ತಲುಪುವಂತೆ ಕಾರ್ಯನಿರ್ವಹಿಸೋಣ ಎಂದರು.
ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಿತಿ ಸದಸ್ಯರನ್ನು ಒಳಗೊಂಡಂತೆ ಪ್ರತ್ಯೇಕ ಸಭೆಗಳನ್ನು ಏರ್ಪಡಿಸಿ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ. ಅಧಿಕಾರಿಗಳು ಸೂಕ್ತ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ಸರ್ಕಾರದ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಲವರ್ಧನೆಯಾಗಿದೆ. ಸರ್ಕಾರದ ಉದ್ದೇಶದ ಸಾಕಾರಕ್ಕಾಗಿ ನಾವೆಲ್ಲ ಒಮ್ಮತದಿಂದ ಶ್ರಮಿಸೋಣ ಎಂದು ಹೇಳಿದರು.
ಸಮಿತಿ ಸದಸ್ಯರಾದ ಕೃಷ್ಣಗೌಡ ಪಾಟೀಲ ಮಾತನಾಡಿ, ರಾಜ್ಯದ ೧.೧೦ ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಫಲವಾಗಿವೆ. ಪಂಚ ಗ್ಯಾರಂಟಿಗಳ ಸದ್ಬಳಕೆಯಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ೫ ಸಾವಿರ ರೂ ಸಹಾಯ ಸಿಗುತ್ತಿದೆ. ಜನಪ್ರತಿನಿಧಿಗಳಾದವರು ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವವರು. ತಾಂತ್ರಿಕ ತೊಂದರೆಗಳ ನಿವಾರಣೆಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಸಫಲರಾಗೋಣ ಎಂದು ಸಲಹೆ ನೀಡಿದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಡಿತರ ಪಡೆಯಲು ಪಡಿತರದಾರರು ಥಂಬ್ ನೀಡಿದರೂ ತಾಂತ್ರಿಕ ಸಮಸ್ಯೆಗಳಿಂದ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಗತಿಸಿದರೂ ಈವರೆಗೂ ಮಂಜೂರಾತಿ ದೊರೆತಿಲ್ಲ. ಇಂತಹ ಹಲವಾರು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಸ್ಥಳದಲ್ಲೇ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ತಾಂತ್ರ‍್ರಿಕ ತೊಡಕುಗಳ ನಿವಾರಣೆಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುವ ಮೂಲಕ ಸರ್ಕಾರದ ಉದ್ದೇಶ ಸಾಕಾರಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ. ಮಾತನಾಡಿ, ಕಳೆದ ಪ್ರಗತಿ ಪರಿಶೀಲನಾ ಸಭೆಯ ನಡುವಳಿಯನ್ನು ಹಾಗೂ ಆಗಿರುವ ಪ್ರಗತಿ ಅಂಕಿ-ಅಂಶಗಳನ್ನು ಸಭೆಗೆ ಮಂಡಿಸಿ, ಶೇ. ೧೦೦ರಷ್ಟು ಪ್ರಗತಿ ನಮ್ಮ ಗುರಿಯಾಗಿರಲಿ. ರಾಜ್ಯದಲ್ಲಿಯೇ ಗದಗ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಉನ್ನತ ಸ್ಥಾನದಲ್ಲಿರುವಂತೆ ನೋಡಿಕೊಳ್ಳೋಣ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಗ್ಯಾರಂಟಿ ಅನುಷ್ಠಾನದ ವಿವರಗಳನ್ನು ಸಭೆಗೆ ಮಂಡಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ದಯಾನಂದ ಪವಾರ, ಸಂಗು ಕರಕಲಕಟ್ಟಿ, ಮೀನಾಕ್ಷಿ ಬೆನಕಣ್ಣವರ, ಶಂಭು ಕಾಳೆ, ನಿಂಗಪ್ಪ ದೇಸಯಿ, ಸಂಗಮೇಶ ಹಾದಿಮನಿ, ರಮೇಶ , ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡಿ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಪಂಚ ಗ್ಯಾರಂಟಿಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಭೆಗೆ ಸರಿಯಾದ ಮಾಹಿತಿ ಹಾಗೂ ಸಮರ್ಪಕ ವಿವರಣೆ ನೀಡದಿರುವ ಸಾರಿಗೆ ಸಂಸ್ಥೆಯ ಬೆಟಗೇರಿ ಹಾಗೂ ಗದಗ ವ್ಯವಸ್ಥಾಪಕರು, ಆಹಾರ ಇಲಾಖೆಯ ಮತ್ತು ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳಿಗೆ ನೋಟೀಸ ಜಾರಿಗೊಳಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಮಿತಿಯ ಅಧ್ಯಕ್ಷರು ಸೂಚಿಸಿದರು.