ಗುಜರಾತ್: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಇಂದು ಗುಜರಾತ್ ಸರ್ಕಾರದ ನೂತನ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಭೂಪೇಂದ್ರ ಪಟೇಲ್ ಸಂಪುಟದ 16 ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ 26 ಸದಸ್ಯರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಗುಜರಾತ್ ರಾಜ್ಯದಲ್ಲಿ ನಡೆದ ಇತ್ತೀಚಿನ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಹೊಸ ಮುಖಗಳು ಕಾಣಿಸಿಕೊಂಡಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾಗಿ ಗಮನ ಸೆಳೆದವರು ರಿವಾಬಾ ಜಡೇಜಾ. ಗುಜರಾತ್ ಅಹ್ಮದಾಬಾದ್‌ನಲ್ಲಿರುವ ಟೆಕ್ನಾಲಾಜಿಕಲ್ ವಿವಿಯಿಂದ ಇಂಜಿನಿಯರಿಂಗ್ ಪದವಿಧರೆಯಾಗಿರುವ ರಿವಾಬಾ ಅವರು ಸೇವೆ ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಇದಕ್ಕಾಗಿಯೇ ಅವರು ಮಾತ್ರುಶಕ್ತಿ ಎಂಬ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆ. ಬಹಳ ತಳ ಮಟ್ಟದಿಂದ ಈ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿರುವುದರಿಂದ ಜಮಾನಗರದ ಜನರು ಅವರಿಗೆ ವಿಶೇಷ ಗೌರವ ನೀಡುತ್ತಾರೆ.
ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲು ರಿವಾಬಾ ಜಡೇಜಾ ಅವರು ರಾಜಪೂರ್ ಸಮುದಾಯದ ಕರ್ಣಿ ಸೇನಾದ ಸದಸ್ಯೆಯಾಗಿದ್ದರು.2018ರಲ್ಲಿ ಪದ್ಮಾವತ್ ಸಿನಿಮಾಗೆ ಈ ಕರ್ಣಿ ಸೇನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಸಂಸ್ಥೆಯ ಮಹಿಳಾ ವಿಭಾಗವನ್ನು ಪ್ರತಿನಿಧಿಸುವಲ್ಲಿ ರಿವಾಬಾ ಮಹತ್ವದ ಪಾತ್ರ ವಹಿಸಿದ್ದಾರೆ. ರಿವಾಬಾ ಅವರು 2019ರಲ್ಲಿ ಬಿಜೆಪಿ ಸೇರಿದ್ದರು. ಅವರ ಚಿಕ್ಕಪ್ಪ ಹರಿಸಿನ್ಹಾ ಸೋಲಂಕಿ ಅವರು ಕಾಂಗ್ರೆಸ್ ನಾಯಕರಾಗಿದ್ದು, ನಂತರದಲ್ಲಿ ಬಿಜೆಪಿ ಸೇರಿದ್ದರು. 2016ರಲ್ಲಿ ಅವರು ಭಾರತೀಯ ಕ್ರಿಕೆಟರ್ ರವೀಂದ್ರ ಜಡೇಜಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬಳು ಪುತ್ರಿ ಇದ್ದಾಳೆ.