ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ಪಟ್ಟಣದ ಮಸ್ಕಿಯವರ ಓಣಿಯ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಗುರುಪ್ಯಾಡಮಿ ಪ್ರಯುಕ್ತ ಏಳು ದಿನದ ಶ್ರೀಗುರು ಚರಿತ್ರೆ ಸಪ್ತಾಹ ಪ್ರಾರಂಭೋತ್ಸವ ಹಾಗೂ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆಯಲಿದೆ ಎಂದು ಡಾ.ರಾಮಶಾಸ್ತ್ರಿ ಜೀರೆ ಹೇಳಿದರು.
ಸ್ಥಳೀಯ ದತ್ತ ಮಂಡಳಿ ವತಿಯಿಂದ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳವಾರ ನಡೆದ ೨ನೇ ದಿನದ ಗುರು ಚರಿತ್ರೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುವಿನ ಪಾತ್ರ ಅನನ್ಯವಾಗಿದ್ದು, ಗುರು ಚರಿತ್ರೆ ಪಾರಾಯಣ ಎಲ್ಲ ಭಕ್ತರು ಮಾಡಬೇಕು. ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನ ಬೆಳಕಿನ ದಾರಿ ತೋರಿಸುವ ಗುರು ಎರಡನೇ ತಾಯಿ ಇದ್ದಂತೆ. ಭಗವಂತನಿಗೆ ನಮಸ್ಕರಿಸುವ ಮೊದಲು ಗುರುವಿಗೆ ನಮಿಸಬೇಕು. ಪವಿತ್ರ ಭಾವನೆಯಿಂದ ಸದಾ ಗುರುಸ್ಮರಣೆ ಮಾಡುವದರಿಂದ ಜೀವನ ಪಾವನಗೊಂಡು ಬದುಕು ಶಾಂತಿ-ನೆಮ್ಮದಿ ಕಾಣುವದು ಎಂದರು.
ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ೫ಕ್ಕೆ ಕಾಕಡಾರತಿ, ಸುಪ್ರಭಾತ, ಬೆಳಿಗ್ಗೆ ೮.೩೦ಕ್ಕೆ ಮಹಾರುದ್ರಾಭಿಷೇಕ ಹಾಗೂ ವೇ.ಮೂ.ಕಲ್ಲಿನಾಥಶಾಸ್ತ್ರಿ ಜೀರೆ ಅವರಿಂದ ಗುರು ಚರಿತ್ರೆ ಪಾರಾಯಣ ಹೀಗೆ ಏಳು ದಿನ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಫೆ.೨೫ರಂದು ಪಾರಾಯಣ ಮಂಗಲಗೊಳ್ಳಲಿದೆ. ಪ್ರತಿದಿನ ಗುರುದತ್ತಾತ್ರೇಯನಿಗೆ ವಿಶೇಷ ಅಲಂಕಾರ, ಪೂಜೆ, ಸಂಜೆ ಭಜನೆ, ವಿವಿಧ ಸೇವೆಗಳ ಬಳಿಕ ಶೇಜಾರತಿಯೊಂದಿಗೆ ತೀರ್ಥ ಪ್ರಸಾದ ನಡೆಯಲಿದೆ ಎಂದರು.
ಈ ವೇಳೆ ಕಲ್ಲಿನಾಥಶಾಸ್ತ್ರಿ ಜೀರೆ, ಶಾರದಾಬಾಯಿ ಜೀರೆ, ಡಾ.ಗಿರೀಶ ಜೀರೆ, ಡಾ.ಉಮಾ ಜೀರೆ, ರಾಧಾಬಾಯಿ ಜೀರೆ, ಅನುರಾಧಾ ದೇಸಾಯಿ, ಸಹನಾ ತೈಲಂಗ್, ವಿನಾಯಕ ಜಗತಾಪ್, ವರ್ಷಾ ಜೀರೆ, ವಿನಾಯಕ ಜೀರೆ, ಲತಕ್ಕ ಕುಲಕರ್ಣಿ, ವಿನಾಯಕ ರಾಜಪುರೋಹಿತ ಮುಂತಾದವರಿದ್ದರು.