ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ ಸಭೆ ಆರಂಭಕ್ಕೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆ ಈ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿಗಳು ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ ವಿಚಾರ. ಕೆಲವು ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ ಇದಾಗಿದೆ. ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಈ ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು ಕರೆದು ಮಾತನಾಡುವುದು ಏನಿದೆ? ಮುಖ್ಯಮಂತ್ರಿಗಳೇ ನೇರವಾಗಿ ನಿರ್ಧಾರ ಕೈಗೊಳ್ಳಬಹುದು. ನೇರವಾಗಿ ಬೆಳೆಗಾರರ ಜತೆ ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಬಹುದು. ಅದನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲಿ ಈ ಸರಕಾರ ಮುಳುಗಿದೆ ಎಂದು ಅವರು ಟೀಕಿಸಿದರು.
ಸಿಎಂ ನೇರವಾಗಿ, ಮುಕ್ತವಾಗಿ ಕಬ್ಬು ಬೆಳೆಗಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಸಿಎಂ ಅವರು ಆ ಕೆಲಸ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಅವರು ಮಣಿದಿರುವ ಸಾಧ್ಯತೆ ಇದೆ. ಅಂತಹ ಒತ್ತಡಕ್ಕೆ ಮಣಿಯದೆ ಮೊದಲು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.


