ವಿಜಯಸಾಕ್ಷಿ ಸುದ್ದಿ, ಗದಗ : ಮಹಾಶರಣ ಹಡಪದ ಅಪ್ಪಣ್ಣ ಅವರ ವಚನಗಳನ್ನು ಸಮಾಜದ ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಶರಣರ ಜಯಂತಿಗಳಲ್ಲಿ ಮಕ್ಕಳಿಗೆ ಮಹಾಶರಣರ ವಚನಗಳನ್ನು ಅರ್ಥೈಸುವ ಕೆಲಸಗಳೊಂದಿಗೆ ಸರ್ಕಾರದ ಜಯಂತಿ ಅರ್ಥಪೂರ್ಣವಾಗಲಿದೆ. ಹಡಪದ ಅಪ್ಪಣ್ಣ ಸಮುದಾಯವು ಚಿಕ್ಕದಾದರೂ ಸಹ ಜಯಂತಿ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಆಗಮಿಸಿದ್ದು ಸಂತಸ ತಂದಿದೆ ಎಂದರು.
ನಗರದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನಕ್ಕೆ ಈಗಾಗಲೇ ನಿವೇಶನ ದೊರೆತು ಸಮುದಾಯ ಭವನ ಕಟ್ಟಡ ಆರಂಭವಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು. ಮುಂದಿನ ವರ್ಷ ಇದೇ ಸಮಯಕ್ಕೆ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ಅಲ್ಲಿಯೇ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಹಡಪದ ಅಪ್ಪಣ್ಣ ಸಂಘದ ಜಿಲ್ಲಾಧ್ಯಕ್ಷ ಮೋಹನ ಚಂದಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಹುಲಕೋಟಿ ಮುಖ್ಯ ಶಿಕ್ಷಕ ಎ.ವಿ. ಪ್ರಭು ಹಡಪದ ಅಪ್ಪಣ್ಣನವರ ಜೀವನ ಮತ್ತು ಸಂದೇಶದ ಕುರಿತು ಉಪನ್ಯಾಸ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಎಸ್.ಎನ್. ಬಳ್ಳಾರಿ, ಕಲ್ಲಪ್ಪ ಹಡಪದ, ಬಸವರಾಜ ಕಡೆಮನಿ, ಅಶೋಕ ಮಂದಾಲಿ, ಪ್ರಭು ಬುರಬುರೆ, ಸೋಮಣ್ಣ ಹಡಪದ, ಸೋಮು ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸೇರಿದಂತೆ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ಸಮಾಜದಿಂದ ನೀಡಿ ಗೌರವಿಸಲಾಯಿತು.
ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿನ ಜಾತಿ, ಮತ, ಪಂಥ ತೊಡೆದು ಹಾಕಲು ಹೋರಾಟ ನಡೆಸಿದ ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು ಹಡಪದ ಅಪ್ಪಣ್ಣ. ಬಸವಣ್ಣನವರ ಮಹಾಮನೆಯ ಮುಖ್ಯಸ್ಥರಾಗಿ ಸಹ ಅವರು ಕಾರ್ಯ ಮಾಡಿದ್ದಾರೆ ಎಂದರು.