‘ಹನುಮಾನ್’ ಸಿನಿಮಾಗೆ ಪರಮ ಭಕ್ತ ಸಾಥ್…ತೇಜ ಸಜ್ಜಾ ಮೀಟ್ಸ್ ಧ್ರುವ..
ಸ್ಯಾಂಡಲ್ ವುಡ್ ಭರ್ಜರಿ ಹುಡ್ಗ ಧ್ರುವ ಸರ್ಜಾ ಆಂಜನೇಯನ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸದಾ ಹನುಮಾನ್ ಭಕ್ತಿ ಮೆರೆಯುವ ಆಕ್ಷನ್ ಪ್ರಿನ್ಸ್ ಅವರನ್ನು ಹನುಮಾನ್ ಸಿನಿಮಾದ ನಾಯಕ ತೇಜ ಸಜ್ಜಾ ಭೇಟಿಯಾಗಿದ್ದಾರೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತೇಜ, ಈ ವೇಳೆ ಆಂಜನೇಯನ ಪರಮಭಕ್ತ ಧ್ರುವರನ್ನು ಭೇಟಿಯಾಗಿ ಕೆಲಕಾಲ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮಾರ್ಟಿನ್ ಕೆಡಿಗೆ ತೇಜ ವಿಷ್
ತೇಜ ಸಜ್ಜಾ ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ತಮ್ಮ ಚಿತ್ರ ನೋಡುವಂತೆ ಧ್ರುವ ಸರ್ಜಾ ಅವರಿಗೆ ತೇಜ ಮನವಿ ಮಾಡಿದ್ದಾರೆ. ಈ ವೇಳೆ ಹನುಮಾನ್ ಟ್ರೇಲರ್ ಅದ್ಭುತವಾಗಿದ್ದು, ತಾವು ಸಿನಿಮಾ ನೋಡುವುದಾಗಿ ಆಕ್ಷನ್ ಪ್ರಿನ್ಸ್ ತಿಳಿಸಿದ್ದಾರೆ.
ಧ್ರುವ ಅಪ್ ಕಮ್ಮಿಂಗ್ ಚಿತ್ರಗಳಾದ ಕೆಡಿ, ಮಾರ್ಟಿನ್ ಸಿನಿಮಾಗೆ ತೇಜ ಸಜ್ಜಾ ಶುಭಾಶಯ ಕೋರಿದ್ದು, ನಿಮ್ಮ ಪೊಗರು ಸಿನಿಮಾ ತೆಲುಗು ರಂಗದಲ್ಲಿ ಸದ್ದು ಮಾಡಿತ್ತು. ನೀವು ಅದ್ಭುತವಾಗಿ ಆಕ್ಷನ್ ಮಾಡುತ್ತೀರಾ ಎಂದು ಧ್ರುವ ನಟನೆಯನ್ನು ತೇಜ ಮೆಚ್ಚಿಕೊಂಡಿದ್ದಾರೆ.
ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ.
ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜಾ ನಟಿಸುತ್ತಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಹನುಮಾನ್ ಕುರಿತು ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ.
ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜನವರಿ 12, 2024ರಂದು ಬಹು ಭಾಷೆಯಲ್ಲಿ ಬಿಡುಗಡೆಯಾಗಲಿದೆ.