KGF ಚಾಚಾ ಖ್ಯಾತಿಯ ಹರೀಶ್ ರಾಯ್ ಇನ್ನಿಲ್ಲ

0
Spread the love

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಇಂದು ನಿಧನ ಹೊಂದಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

‘ಓಂ, ನಲ್ಲ, ಕೆಜಿಎಫ್, ಕೆಜಿಎಫ್ 2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಹೋಗುತ್ತಿರುವ ವಿಡಿಯೋ ಹಂಚಿಕೊಂಡಿದ್ದ ಹರೀಶ್‌ ತಮ್ಮ ಆರೋಗ್ಯ ಸುಧಾರಿಸುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು.

ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಅನೇಕರು ಅವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದರು. ಯಶ್ ಸಹಾಯಕ್ಕೆ ಧನ್ಯವಾದ ತಿಳಿಸಿದ್ದ ಅವರು, ಚಿಕಿತ್ಸೆ ಮುಂದುವರಿಸಿಕೊಂಡಿದ್ದರು.

90ರ ದಶಕದಲ್ಲಿ ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಹರೀಶ್ ರಾಯ್ ಅವರು ಕನ್ನಡದ ಜೊತೆಗೆ ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ‘ಅಂಡರ್ ವರ್ಲ್ಡ್’, ‘ರಾಜ್ ಬಹದ್ದೂರ್’, ‘ಸಂಜು ವೆಡ್ಸ್ ಗೀತಾ’, ‘ಭೂಗತ’, ‘ಜೋಡಿ ಹಕ್ಕಿ’, ‘ತಾಯವ್ವ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯಿಲ್ಲದ ಗುರುತು ಬಿಟ್ಟಿವೆ.

ಒಮ್ಮೆ ವಿವಾದಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಬಳಿಕ ಚಿತ್ರರಂಗಕ್ಕೆ ಮರಳಿ ಖಳನಟನಾಗಿ ಮರುಹುಟ್ಟು ಪಡೆದಿದ್ದರು. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ನೆನೆದು ಕಣ್ಣೀರಿಟ್ಟಿದ್ದರು ಎಂಬುದು ಪ್ರೇಕ್ಷಕರಿಗೆ ನೆನಪಾಗಿದೆ. ಹರೀಶ್ ರಾಯ್ ತಮ್ಮ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.


Spread the love

LEAVE A REPLY

Please enter your comment!
Please enter your name here