ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ. ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಮುಚ್ಚಲಾಗಿದೆ. ಇಂದು ಶಾಸ್ತ್ರೋಕ್ತವಾಗಿ ಪುರೋಹಿತರು ವಿಶೇಷ ಪೂಜೆ ಸಲ್ಲಿಸಿ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿದರು. ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ, ನೈವೇದ್ಯವನ್ನು ನೆರವೇರಿಸಿ, ಮಧ್ಯಾಹ್ನ 1.06 ಕ್ಕೆ ಗರ್ಭಗುಡಿಯ ಬಾಗಿಲನ್ನು ಕ್ಲೋಸ್ ಮಾಡಲಾಯಿತು. ಈ ಘಳಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಶಾಸಕರಾದ ಸ್ವರೂಪ್ ಪ್ರಕಾಶ್,
ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಸಿಇಓ ಪೂರ್ಣಿಮಾ, ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಅನೇಕ ಜಿಲ್ಲಾಮಟ್ಟದ ಅಧಿಕಾರಿಗಳು ಸಾಕ್ಷಿಯಾದರು. ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಹಕರಿಸಿದ, ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇನ್ನು ಬಾರಿ ಹಾಸನಾಂಬೆಯ ಇತಿಹಾಸದಲ್ಲಿಯೇ ಹೆಚ್ಚು ದರ್ಶನವನ್ನು ಪಡೆದುಕೊಂಡಿದ್ದಾರೆ. ಒಟ್ಟು 15 ದಿನಗಳ ಜಾತ್ರಾ ಮಹೋತ್ಸವದಲ್ಲಿ 13 ದಿನಗಳು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 1000, 300 ರೂಪಾಯಿ ಟಿಕೆಟ್, ಗೋಲ್ಡ್ ಕಾರ್ಡ್ ಹಾಗೂ ಧರ್ಮದರ್ಶನ ಸೇರಿ ಒಟ್ಟಾರೆಯಾಗಿ 26.12 ಲಕ್ಷ ಜನರು ದರ್ಶನವನ್ನು ಪಡೆದುಕೊಂಡಿದ್ದಾರೆ.
ಹಾಸನಾಂಬೆ ದೇವಾಲಯಕ್ಕೆ 1000 ಹಾಗೂ 300 ರೂಪಾಯಿ ಟಿಕೆಟ್ ನಿಂದ ಸುಮಾರು 21 ಕೋಟಿ ಆದಾಯ ಹರಿದುಬಂದಿದ್ದು, ನಾಳೆ ಹುಂಡಿ ಹಣ ಎಣಿಕೆ ಮಾಡದ ಬಳಿಕ ಒಟ್ಟಾರೆ ಆದಾಯದ ಲೆಕ್ಕಸಿಗಲಿದೆ. ಇಡೀ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿ, ಹಲವು ಬದಲಾವಣೆಗಳನ್ನು ಮಾಡಿ, ಯಾವುದೇ ಸಣ್ಣ ಗೊಂದಗಳೂ ಆಗದಂತೆ ಜಾತ್ರಾಮಹೋತ್ಸವದ ಯಶಸ್ಸಿಗೆ ಕಾರಣರಾದವರು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ. ಜಾತ್ರೆಯ ಕಡೆಯವರೆಗೂ ಇದ್ದು, ಎಲ್ಲ ವಿವರಣೆ ನೀಡಿ, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಅಕ್ಟೋಬರ್ 9 ರಿಂದ 23 ರ ವರೆಗೆ ನಡೆದ ಜಾತ್ರಾ ಮಹೋತ್ಸವವು ಇಂದು ಮುಕ್ತಾಯಗೊಂಡಿದೆ.