HomeKarnataka Newsಗುಂಡಿಗಳ ಬಗ್ಗೆ ಡಿಸಿಎಂ ಅವರನ್ನು ಕೇಳಿ ಎಂದ ಸಿಎಂಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

ಗುಂಡಿಗಳ ಬಗ್ಗೆ ಡಿಸಿಎಂ ಅವರನ್ನು ಕೇಳಿ ಎಂದ ಸಿಎಂಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

For Dai;y Updates Join Our whatsapp Group

Spread the love

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಲು ವಿಧಿಸಿರುವ ಡೆಡ್ ಲೈನ್ ಮುಗಿದಿದ್ದರೂ ಇನ್ನು ಗುಂಡಿಗಳು ಹಾಗೆಯೇ ಇವೆ. ಆ ಬಗ್ಗೆ ಮಾಧ್ಯಮಗಳು ಕೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಎಂದಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ಸಪ್ನ ಪುಸ್ತಕ ಮಳಿಗೆ ಪುಸ್ತಕ ಜಾತ್ರೆಯಲ್ಲಿ ಪಾಲ್ಗೊಂಡ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಶುಕ್ರವಾರದ ದಿನ ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆ ಬೇಜವಾಬ್ದಾರಿತನದ್ದು ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ? ಅಥವಾ ಡಿ.ಕೆ. ಶಿವಕುಮಾರ್ ಅವರಾ? ಎನ್ನುವ ಪ್ರಶ್ನೆ ಬರುತ್ತೆ.

ಮುಖ್ಯಮಂತ್ರಿಗಳೇ ಸಭೆ ಮಾಡಿ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರು. ಆದರೆ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಮುಖ್ಯಮಂತ್ರಿಗಳ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೊಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಹೇಳಿಕೆ ನೋಡಿದಾಗ ಅವರು ಈ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಅಸಮರ್ಥ ಆಗಿದ್ದೇನೆ ಎಂದು ಹೇಳಿದ ರೀತಿ ಇದೆ. ಅವರು ಇಂಥ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.

ನವೆಂಬರ್ ಕ್ರಾಂತಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು:

ನವೆಂಬರ್ 21ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡುತ್ತಾರೆ ಎಂಬ ಚರ್ಚೆ ಬಗ್ಗೆ ಗಮನ ಸೆಳೆದಾಗ, ಅದು ಅವರ ಪಕ್ಷದಲ್ಲಿನ ತೀರ್ಮಾನಗಳು. ಅವರಿಗೆ ಬಿಟ್ಟಿರೋದು, ನಾನು ಈ ವಿಷಯದಲ್ಲಿ ಮಾತಮಾಡುವುದು ಸಣ್ಣತನ ಆಗುತ್ತದೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಮಾಡಿಕೊಳ್ಳಲಿ ಎಂದರು ಕುಮಾರಸ್ವಾಮಿ ಅವರು.

ಸರ್ಕಾರದ ಅವಧಿ ಇನ್ನು ಎರಡೂವರೆ ವರ್ಷ ಇದೆ. ಆದರೆ ಎರಡೂವರೆ ವರ್ಷ ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್ ನವರೇ ಪ್ರತಿನಿತ್ಯ ನಗೆಪಾಟಿಗೆ ಒಳಗಾಗುತ್ತಿದ್ದಾರೆ. ವಿರೋಧ ಪಕ್ಷಗಳು ಮಾತಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರವರೇ ಮಾತನಾಡುತ್ತಿರುವಾಗ ನಾವು ಯಾವ ದೃಷ್ಟಿಯಿಂದ ನೋಡೋದು? ಅವರ ಭಿನ್ನಮತ ನೋಡುವ ಅಗತ್ಯ ಎನ್ಡಿಎ ಮೈತ್ರಿಕೂಟಕ್ಕೆ ಇಲ್ಲ. ಅವರ ಪಕ್ಷದಲ್ಲಿರುವ ಶಾಸಕರು, ಮಂತ್ರಿಗಳೇ ದೊಡ್ಡ ಮಟ್ಟದಲ್ಲಿ ನೋಡ್ತಾ ಇದ್ದಾರೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಮನೆಗಳ ಮುಂದೆ ಕಸ; ಸರ್ಕಾರದ ಹೊಸ ಕಾರ್ಯಕ್ರಮ ಎಂದು ಲೇವಡಿ

ಬಿಬಿಎಂಪಿ ಸಿಬ್ಬಂದಿ ಮನೆಗಳ ಮುಂದೆ ಕಸ ಸುರಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಅದರಿಂದ ಏನು ಸಾಧನೆ ಮಾಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಮಾಡುವಲ್ಲಿ ವೈಜ್ಞಾನಿಕ ತೀರ್ಮಾನ ಮಾಡಬೇಕು.

ಅದು ಬಿಟ್ಟು ಲಾರಿಯಲ್ಲಿ ಕಸ ತುಂಬಿಕೊಂಡು ಒಂದು ಮನೆ ಮುಂದೆ ಹೊರಗಡೆ ಹಾಕುವುದು ಎಷ್ಟು ಸರಿ? ಸರ್ಕಾರಕ್ಕೆ ಸಮಸ್ಯೆ ಇದೆ, ಅವರಿಗೆ ಕಸ ವಿಲೇವಾರಿ ಮಾಡುವುದಕ್ಕೆ ಜಾಗ ಇಲ್ಲ. ಅದಕ್ಕೆ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇವಾರಿ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರ್ಕಾರ ಮನೆಗಳ ಮುಂದೆ ಕಸ ಸುರಿಯುವ ಹೊಸ ವಿನೂತನ ಕಾರ್ಯಕ್ರಮ ಮಾಡಿದೆ ಎಂದು ಹೆಚ್ಡಿಕೆ ಕಿಡಿಕಾರಿದರು.

ಸುರಂಗ ರಸ್ತೆ ಬಗ್ಗೆ ಪ್ರತಿಕ್ರಿಯೆ:

ಸುರಂಗ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ನೋಡೋಣ.. ಇವರು ಟನಲ್ ರಸ್ತೆ ಕೆಲಸ ಯಾವಾಗ ಪ್ರಾರಂಭ ಮಾಡುತ್ತಾರೆ ಎಂದು. ನುರಿತ ತಜ್ಞರು ಅಭಿಪ್ರಾಯ ಪಡೆದು ಕೆಲಸ ಆರಂಭ ಮಾಡುತ್ತಾರೋ ಅಥವಾ ಹಾಗೆಯೇ ಕಾಮಗಾರಿ ಆರಂಭ ಮಾಡುತ್ತಾರೋ ನೋಡೋಣ.

ನಾನು ಹೇಳೋದು ಬೆಂಗಳೂರು ಜನರ ಪ್ರತಿನಿತ್ಯ ಜನರ ಸಮಸ್ಯೆ ಬಗ್ಗೆ. ಅದು ಬಗೆಹರಿಯಬೇಕು. ಇಲ್ಲಿ ಟನಲ್ ರೋಡ್ ಮಾಡ್ತಾರೋ, ಎಲಿವೆಟೆಡ್ ರಸ್ತೆ ಮಾಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ಜನರು ಪ್ರತಿನಿತ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜನರ ಬದುಕಿನಲ್ಲಿ ಚಲ್ಲಾಟ ಆಡಬೇಡಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!