ಬೆಂಗಳೂರು:- ಜಮೀರ್ ಅಹಮ್ಮದ್ ಅವರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತಾಡಿದ್ದು ಸರಿಯಲ್ಲ, ಇದನ್ನ ನಾನು ಕೂಡ ಖಂಡಿಸುತ್ತೇನೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕುಮಾರಸ್ವಾಮಿ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ. ಜಮೀರ್ ಹೇಳಿಕೆ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾಗೆ ಮಾತನಾಡುವುದು ಸರಿಯಲ್ಲ. ಯಾರೂ ವೈಯಕ್ತಿಕವಾಗಿ ನಿಂದನೆ ಮಾಡಬಾರದು ಅಂತ ಹೇಳಿದ್ದಾರೆ ಎಂದರು.
ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತಾಡಿದ್ರು. ಖರ್ಗೆ ಮುಖ ಸುಟ್ಟು ಹೋದ ಹಾಗೆ ಕಾಣುತ್ತೆ. ಅವರ ಚರ್ಮ ಸುಟ್ಟು ಹೋಗಿದೆ, ಬ್ಲ್ಯಾಕ್ ಆಗಿದೆ ಅಂತ ಮಾತಾಡಿದ್ರು. ಆಗ ಯಾಕೆ ಬಿಜೆಪಿ-ಜೆಡಿಎಸ್ ನವರು ಅದನ್ನ ವಿರೋಧ ಮಾಡಲಿಲ್ಲ. ಅರಗ ಜ್ಞಾನೇಂದ್ರ ವಿರುದ್ದ ಏನಾದ್ರು ಮಾಡಿದ್ರಾ? ಇದು ರಾಷ್ಟ್ರೀಯ ಸುದ್ದಿ ಆಯ್ತಾ ಎಂದು ಪ್ರಶ್ನೆ ಮಾಡಿದರು.
ಜಮೀರ್ ಹೇಳಿಕೆಗೆ ನಾನು ಸಮರ್ಥನೆ ಮಾಡುವುದಿಲ್ಲ. ಈಗಾಗಲೇ ಸಿಎಂ, ಡಿಸಿಎಂ, ವರಿಷ್ಠರು ಚರ್ಚೆ ಮಾಡಿದ್ದಾರೆ. ಯಾರು ಕೂಡಾ ಬಣ್ಣದ ಬಗ್ಗೆ, ಹಾವ-ಭಾವದ ಬಗ್ಗೆ ಮಾತನಾಡುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.