ಕೊಪ್ಪಳ:– ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಜರುಗಿದೆ.
ರಮೇಶ್(4), ಜಾನು(2) ಮತ್ತು ತಾಯಿ ಲಕ್ಷ್ಮವ್ವ ಮೃತರು. ಇನ್ನು ಸ್ಥಳಕ್ಕೆ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೆಣಕಲ್ ಗ್ರಾಮದಲ್ಲಿ 30 ವರ್ಷದ ಲಕ್ಷ್ಮವ್ವ ಬಜಂತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ಮಕ್ಕಳಿಗೆ ನೇಣು ಹಾಕಿದ್ದಾಳೆ. ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದುವರೆಗೂ ಯಾರು ದೂರು ಕೊಟ್ಟಿಲ್ಲ ಎಂದರು.
ಲಕ್ಷ್ಮವ್ವ 2016ರಲ್ಲಿ ವಿವಾಹವಾಗಿದ್ದರು. ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಒಂದೇ ಕೊಠಡಿಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಹೇಳುತ್ತಿದ್ದಾರೆ. ದೂರು ಕೊಟ್ಟ ಬಳಿಕ ಪರಿಶೀಲನೆ ಮಾಡುತ್ತೇವೆ ಎಂದು ಎಸ್ಪಿ ರಾಮ್ ಅರಸಿದ್ದಿ ಹೇಳಿದ್ದಾರೆ.


