ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕಡಕೋಳದ ಶ್ರೀ ಚನ್ನಪ್ಪ ವೀರಪ್ಪ ಅಂಗಡಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಳೆಯ ವಿದ್ಯಾರ್ಥಿಗಳ ಹೃದಯಸ್ಪರ್ಶಿ ಸ್ನೇಹಮಿಲನ ಕಾರ್ಯಕ್ರಮ ನೆರವೇರಿತು.
ಶಾಲೆಯಲ್ಲಿ ೨೦೦೨-೦೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸೇರಿದ್ದ ಹಳೆಯ ಸ್ನೇಹಿತರೆಲ್ಲರೂ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಬಾಲ್ಯದ ಆಟಗಳನ್ನು ನೆನೆದು ಪುಳಕಿತಗೊಂಡರು. ಪರಸ್ಪರ ತಮ್ಮ ಸಾಧನೆಗಳನ್ನು ಹೇಳಿಕೊಂಡರು. ತಮ್ಮ ಗುರುಗಳಿಗೆ ಗೌರವ ಪೂರ್ವಕ ಕೃತಜ್ಞತೆಯೊಂದಿಗೆ ಗುರುವಂದನೆ ಸಲ್ಲಿಸಿ ಕೃತಾರ್ಥರಾದರು.
ತಾವು ಗಳಿಸಿದ ಪದವಿ ಹಾಗೂ ತಾವು ಮಾಡುವ ಕೆಲಸದ ಕುರಿತು ಕಿರಿಯರಿಗೆ ವಿಸ್ತಾರವಾಗಿ ಹೇಳಿದರು. ತಾವು ನಡೆದ ಬಂದ ದಾರಿಯನ್ನು ಅದಕ್ಕೆ ತಮ್ಮ ಶಿಕ್ಷಕರು ನೀಡಿದ ಸಂಸ್ಕಾರವನ್ನು ಕೂಡ ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು, ಉಪ ಪ್ರಾಂಶುಪಾಲರು, ಮುಂಡರಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಅಂತೂರ-ಬೆಂತೂರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ದೊಡ್ಡಣ್ಣವರ, ನವಲಗುಂದ ತಾಲೂಕು ಶಿರೂರಿನ ಎನ್.ಜಿ. ಬಾಳನಗೌಡರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ. ಭಾಗ್ಯಜ್ಯೋತಿ ಕೋಟಿಮಠ, ಶಾಲೆಯ ಭೂದಾನಿಗಳಾದ ಬಾಬಣ್ಣ ಶೆಟ್ರು ಅಂಗಡಿ, ತಿಪ್ಪಣ್ಣ ಕೊಂಚಿಗೇರಿ, ಊರಿನ ಗುರು-ಹಿರಿಯರು ಭಾಗವಹಿಸಿದ್ದರು.