ಬೆಂಗಳೂರು: ಕಳೆದ ವರ್ಷ ಭಾರಿ ಮಳೆ ಹಾಗೂ ದಾಖಲೆ ಮಟ್ಟದ ಚಳಿ ಅನುಭವಿಸಿದ್ದ ರಾಜ್ಯದ ಜನತೆಗೆ ಇದೀಗ ತೀವ್ರ ಬಿಸಿಲಿನ ಸರದಿ ಎದುರಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದ್ದು, ಬಿಸಿಗಾಳಿಯ ತೀವ್ರತೆ ಕೂಡ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಐಎಂಡಿ ಪ್ರಕಾರ, ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ. ಸಾಮಾನ್ಯ ದಿನಗಳಿಗಿಂತ 3ರಿಂದ 15 ದಿನಗಳವರೆಗೆ ಹೆಚ್ಚುವರಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 40ರಿಂದ 43 ಡಿಗ್ರಿವರೆಗೆ ತಲುಪುವ ಈ ಭಾಗಗಳಲ್ಲಿ ಈ ಬಾರಿ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆಯ ಪ್ರಮಾಣವೂ ಹೆಚ್ಚಿರಲಿದೆ. ಇದರಿಂದ ಜನರಿಗೆ ಅತಿಯಾದ ಬೆವರು, ಸುಸ್ತು ಹಾಗೂ ಅಸಹನೆ ಹೆಚ್ಚಾಗುವ ಸಾಧ್ಯತೆ ಇದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಹವಾಮಾನ ತಜ್ಞರ ಪ್ರಕಾರ, ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಸ್ತುತ ದುರ್ಬಲ ‘ಲಾ-ನಿನಾ’ ಪರಿಸ್ಥಿತಿ ಇದೆ. ಆದರೆ ಜಾಗತಿಕ ಮಾದರಿಗಳ ಪ್ರಕಾರ, ಈ ಪರಿಸ್ಥಿತಿ ಶಿಥಿಲಗೊಂಡು ಮುಂದಿನ ದಿನಗಳಲ್ಲಿ ‘ಎಲ್-ನಿನೋ’ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದರಿಂದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ.
ಮಾರ್ಚ್‌ನಿಂದ ಮೇವರೆಗೆ ಬಿಸಿಗಾಳಿಯ ತೀವ್ರತೆ ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ವೃದ್ಧರು, ಮಕ್ಕಳು, ರಸ್ತೆಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬಿಸಿಲಿನ ತೀವ್ರತೆಯಿಂದ ದೇಹದ ನೀರಿನ ಪ್ರಮಾಣ ಕಡಿಮೆಯಾಗುವುದು, ಹೀಟ್ ಸ್ಟ್ರೋಕ್ ಹಾಗೂ ದೌರ್ಬಲ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.



