ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ಮತ್ತು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ಉಷ್ಣಾಂಶ ಹೆಚ್ಚಳವಾಗುವ ಸೂಚನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜನರು ಮಧ್ಯಾಹ್ನ ಸಮಯದಲ್ಲಿ ಅಗತ್ಯವಿಲ್ಲದೆ ಹೊರಗೆ ಹೋಗಬಾರದೆಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ಇದರ ಜೊತೆಗೆ ಅರಬ್ಬಿ ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಬೀಸುತ್ತಿದೆ. ಗಾಳಿ ಒತ್ತಡ ಹೆಚ್ಚಾದ ಪರಿಣಾಮ ಕಾರವಾರ ಸೇರಿದಂತೆ ಹಲವು ಕಡೆ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿದ್ದು, ಮುಂದಿನ ಹವಾಮಾನ ಸುಧಾರಣೆಯ ನಿರೀಕ್ಷೆಯಲ್ಲಿ ಮೀನುಗಾರರು ಕಾಯುತ್ತಿದ್ದಾರೆ. ಅಧಿಕಾರಿಗಳು ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.



