ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅಬ್ಬಿಗೇರಿ-ರೋಣ-ಪಾಲಾ-ಬದಾಮಿ ಮುಖ್ಯ ರಸ್ತೆಯ ಎಡ ಬದಿಯಲ್ಲಿ ವಿದ್ಯುತ್ ಸರಬರಾಜು ತಂತಿ ಅಳವಡಿಸುವಾಗ ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದ್ದರು. ಮುಖ್ಯ ರಸ್ತೆಯ ಸೌಂದರ್ಯವನ್ನು ಹೆಚ್ಚಿಸುತ್ತಿರುವ ಮತ್ತು ಬೇಸಿಗೆಯಲ್ಲಿ ಕೃಷಿಕರಿಗೆ, ಪಾದಚಾರಿಗಳಿಗೆ ನೆರಳು ನೀಡುವ ದೊಡ್ಡ ದೊಡ್ಡ ಹುಣಸೆ ಮರಗಳು ಈ ಮಾರ್ಗದಲ್ಲಿದ್ದು, ಹೆಸ್ಕಾಂನಿಂದ ವಿದ್ಯುತ್ ಕಂಬ, ತಂತಿಗಳನ್ನು ಅಳವಡಿಸಿದರೆ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಅಪಾರ ಹಾನಿಯಾಗುತ್ತದೆ ಎಂದು ಲಿಖಿತ ಅರ್ಜಿಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಲಾಗಿತ್ತು. ಸಾರ್ವಜನಿಕರ ವಿರೋಧದ ನಡುವೆ, ಹೆಸ್ಕಾಂ ವಿದ್ಯುತ್ ಕಂಬ ಹಾಗೂ ಮರಗಳ ನಡುವೆಯೇ ತಂತಿಗಳನ್ನು ಅಳವಡಿಸಿತ್ತು.
ಇದೇ ಸಂದರ್ಭದಲ್ಲಿ ಅಟಲ್ ಜೀ ವಸತಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಪರಿಣಾಮ, ನಿತ್ಯವೂ ವಿದ್ಯುತ್ ತಂತಿ ಮರದ ಟೋಂಗೆಗಳಿಗೆ ಸ್ಪರ್ಶಿಸಿ ದೊಡ್ಡ ಮರದ ವಾಲಿಯಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮರವೀಗ ಧರೆಗುರುಳಿದೆ. ಆದರೆ, ರಸ್ತೆಯಲ್ಲಿ ಯಾವುದೇ ಬೈಕ್ ಸವಾರು, ಕೃಷಿ ಕಾರ್ಮಿಕರು ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.
ಅಟಲ್ ಜೀ ವಸತಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅನಿವಾರ್ಯವಾಗಿರುವುದರಿಂದ ಹೆಸ್ಕಾಂ ಇಲಾಖೆಯಿಂದ ಮರಗಳ ಮಧ್ಯ ಹಾದು ಹೋಗುವ ತಂತಿಗಳಿಗೆ ಪಿವಿಸಿ ಪೈಪ್ ಅಳವಡಿಸಿದ್ದಾರೆ. ಆದರೆ, ಆ ಪೈಪ್ ನಿತ್ಯವೂ ಸುಡುತ್ತಲೇ ಬಂದಿದ್ದರಿಂದ ಗಿಡದ ಟೊಂಗೆಗೆ ಬೆಂಕಿ ಹೊತ್ತಿಕೊಂಡಿದೆ.
ಅಬ್ಬಿಗೇರಿ-ರೋಣ ಮುಖ್ಯ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳಿಂದ ಹಾದು ಹೋಗಿರುವ ತಂತಿಗಳ ಕೆಳಗೆ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಿಡ ಬೆಳೆದು ಮರವಾದಾಗ ವಿದ್ಯುತ್ ಕಂಬಕ್ಕೆ ಟೊಂಗೆಗಳು ಸ್ಪರ್ಶಿಸುವುದು ಖಚಿತ. ಇದು ನೀರಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.
ಅಬ್ಬಿಗೇರಿ-ರೋಣ ರಸ್ತೆಯಲ್ಲಿ ವಿದ್ಯುತ್ ತಂತಿ ತಗುಲಿ ಮರ ಸುಟ್ಟು ಬಿದ್ದಿರುವ ಮರದ ಬಗ್ಗೆ ಮಾಹಿತಿ ಬಂದಿದ್ದು, ತಂತಿ ಹಾದು ಹೋಗುವ ಸ್ಥಳದಲ್ಲಿ ರೆಂಬೆ-ಕೊಂಬೆಗಳು ಇದ್ದರೆ ಕಡಿಯಲು ನಾನೇ ಅನುಮತಿಯನ್ನು ನೀಡಿದ್ದೇನೆ. ಅಟಲ್ ಜೀ ವಸತಿ ಶಾಲೆಗೆ ವಿದ್ಯುತ್ ಸಂಪರ್ಕ ನೀಡುವುದು ಅನಿವಾರ್ಯವಾಗಿದೆ. ಬೇರೆ ಸ್ಥಳ ಇಲ್ಲದ ಕಾರಣ ಮರಗಳ ನಡುವೆಯೇ ವಿದ್ಯುತ್ ತಂತಿಗಳನ್ನು ತಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಬೇರೆ ವ್ಯವಸ್ಥೆ ಮಾಡುವ ಕುರಿತು ಚರ್ಚೆ ಮಾಡುತ್ತೇವೆ.
– ರಾಘವೇಂದ್ರ ವಿ. ಸಾಲಮನಿ.
ಹೆಸ್ಕಾಂ ಅಭಿಯಂತರ,
ರೋಣ ಉಪವಿಭಾಗ.
“ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಮತ್ತು ದ್ವಿಚಕ್ರ ವಾಹನ ಸವಾರರು ಮರದ ಕೆಳಗೆ ಹೋಗಿ ನಿಲ್ಲುವುದು ಸಹಜ. ಆದರೆ, ವಿದ್ಯುತ್ ತಂತಿಗಳಿಂದ ಇಂತಹ ಅಪಾಯಗಳು ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಹೆಸ್ಕಾಂ ಗಿಡ-ಮರಗಳನ್ನು ಬಿಟ್ಟು ಕಂಬಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಿದರೆ ಅನುಕೂಲವಾಗುತ್ತದೆ. ಇದರಿಂದ ಮರ-ಗಿಡಗಳಿಗೆ ಕೊಡಲಿ ಏಟು ಬೀಳುವುದೂ ತಪ್ಪುತ್ತದೆ.
ಮಂಜುನಾಥ ಚೌಡರ ವಕೀಲರು
ಅಬ್ಬಿಗೇರಿ ಗ್ರಾಮದ ನಿವಾಸಿ.



