RSS ಪಥಸಂಚಲನ, ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ..!

0
Spread the love

ಬೆಂಗಳೂರು: ರಾಜ್ಯ ಸರ್ಕಾರವು ಅಕ್ಟೋಬರ್ 18ರಂದು ಹೊರಡಿಸಿದ್ದ “ಆರ್‌ಎಸ್‌ಎಸ್ ಶಾಖೆ ಹಾಗೂ ಪಥಸಂಚಲನಗಳಿಗೆ ಸಾರ್ವಜನಿಕ ಸ್ಥಳ ಬಳಸಬಾರದು” ಎಂಬ ಆದೇಶಕ್ಕೆ ಕರ್ನಾಟಕ ಹೈಕೋರ್ಟ್​ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಹೌದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಹುಬ್ಬಳ್ಳಿ ಪೊಲೀಸ್ ಕಮೀಷನರ್‌ಗೆ ನೋಟೀಸ್‌ ನೀಡಿದೆ ಮತ್ತು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಅನುಮತಿಯಿಲ್ಲದೇ 10 ಜನರು ಸೇರಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗಿತ್ತು. ಜೊತೆಗೆ ರಸ್ತೆ, ಪಾರ್ಕ್, ಮೈದಾನ, ಕೆರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಂಚಲನ ನಡೆಸುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು.

ಹೈಕೋರ್ಟ್ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಸರ್ಕಾರವು ಪೊಲೀಸ್ ಕಾಯ್ದೆಯಲ್ಲಿನ ಅಧಿಕಾರವನ್ನು ಬಳಸಿಕೊಂಡು ಈ ಆದೇಶ ಹೊರಡಿಸಿದ್ದರೂ, ಅದರಿಂದ ಸಂವಿಧಾನದ ಆರ್ಟಿಕಲ್ 19(1)(A) ಮತ್ತು 19(1)(B) ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಭಾವಪ್ರಕಟನೆಯ ಹಾಗೂ ಸಭೆಯ ಸ್ವಾತಂತ್ರ್ಯ ಹಕ್ಕುಗಳನ್ನು ಹರಾಜು ಹಾಕಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯದ ವಿವಿಧೆಡೆ ಆರ್‌ಎಸ್‌ಎಸ್ ಪಥಸಂಚಲನಗಳನ್ನು ನಿಷೇಧಿಸಲು ಮುಂದಾಗಿದ್ದ ಸರ್ಕಾರಕ್ಕೆ ಈ ತೀರ್ಪು ಹಿನ್ನಡೆಯಾಗಿದೆ.

ಸದ್ಯ ಆರ್​ಎಸ್​ಎಸ್ ಚಟುವಟಿಕೆ ಸಂಬಂಧ ಪೊಲೀಸ್ ಕಾಯ್ದೆಯಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ, ಅತ್ತ ಕಲಬುರಗಿ ಚಿತ್ತಾಪುರದ ಆರ್​ಎಸ್​ಎಸ್ ಪಥಸಂಚಲನ ವಿಚಾರವಾಗಿ ಹೈಕೋರ್ಟ್​ನ ಕಲಬುರಗಿ ಪೀಠ ಈಗಾಗಲೇ ವಿಚಾರಣೆ ನಡೆಸಿದ್ದು, ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ಕೋರ್ಟ್ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here