ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕಪ್ ಗೆಲ್ಲದಿದ್ದರೂ 2008ರಿಂದ ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಈ ಬಾರಿಯ ಹರಾಜಿನಲ್ಲಿನ ಖರೀದಿ ತೃಪ್ತಿಯಾಗಿಲ್ಲ. ಪ್ರಮುಖ ಆಟಗಾರರ ಕೈಬಿಟ್ಟಿದ್ದಾರೆ ಅನ್ನೋ ಕೂಗೂ ಜೋರಾಗಿದೆ. ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನದ ನಡುವೆ ಇದೀಗ ಕನ್ನಡಿಗರ ಆಕ್ರೋಶಕ್ಕೂ ಆರ್‌ಸಿಬಿ ಗುರಿಯಾಗಿದೆ. ಆರ್‌ಸಿಬಿ ಹಿಂದಿ ಹೇರಿಕೆ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.
ಈಗಾಗಲೇ ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಕ್ಸ್ ಖಾತೆ ಹೊಂದಿರುವ ಆರ್ ಸಿಬಿಯು ಭಾನುವಾರ ಹೊಸದಾಗಿ ಖಾತೆ ತೆರೆದಿದ್ದು ಈಗಾಗಲೇ 2600 ಫಾಲೋವರ್ಸ್ ಇದಕ್ಕಿದ್ದಾರೆ. ಇದು ಈಗ ಭಾರೀ ಚರ್ಚೆಯ ವಸ್ತುವಾಗಿ ಬಿಟ್ಟಿದೆ. ಇದು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಈ ಖಾತೆಯಲ್ಲಿ ವಿರಾಟ್ ಕೊಹ್ಲಿ ಅವರು ರಿಟೈನ್ ಆಗಿರುವ ಬಗ್ಗೆ ಹಿಂದಿಯಲ್ಲಿ ಸಂತಸ ವ್ಯಕ್ತಪಡಿಸಿರುವ ವಿಡಿಯೋ, ಕೃನಾಲ್ ಪಾಂಡ್ಯ ಸೇರಿದಂತೆ ಇತರ ಕೆಲ ಆಟಗಾರರು ಆರ್ ಸಿಬಿ ಭಾಗವಾಗಿರುವುದಕ್ಕೆ ಹಿಂದಿಯಲ್ಲಿ ಧನ್ಯವಾದ ಸಮರ್ಪಿಸಿರುವ ವಿಡಿಯೋಗಳಿವೆ.
ಇದಕ್ಕೆ ಕಾಮೆಂಟ್ ಸೆಕ್ಷನ್ ನಲ್ಲಿ ಫ್ರಾಂಚೈಸಿಯನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. “ನೀವು ನಿಮ್ಮ ಫ್ರಾಂಚೈಸಿಯನ್ನು ಉತ್ತರದ ರಾಜ್ಯಗಳಿಗೆ ವರ್ಗಾವಣೆ ಮಾಡುವುದು ಒಳಿತು. ಅಭಿಮಾನಿಗಳು ನಿಮ್ಮೆಲ್ಲಾ ಎಡವಟ್ಟುಗಳನ್ನು ಸಹಿಸಿಕೊಂಡಿದ್ದಾರೆ. ಇದು ಅತಿಯಾಯಿತು. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಒಬ್ಬರು ಎಚ್ಚರಿಕೆ ನೀಡಿದ್ದಾರೆ.
ಇನ್ನೊಬ್ಬರು ನೀವೊಂದು ಕೆಲಸ ಮಾಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಇಡುವ ಬದಲು ರಾಯಲ್ ಚಾಲೆಂಜರ್ಸ್ ಹಿಂದಿ ಎಂದು ಹೆಸರಿಡಿ ಎಂದು ವ್ಯಂಗ್ಯವಾಡಿದ್ದಾರೆ.