ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತದಲ್ಲಿ ದೃಷ್ಟಿ, ಜೀವನ ನೀಡಿದ ಕ್ಷೇತ್ರ ಗದಗ. ಸಂಸ್ಕೃತಿ ಬಿಂಬಿಸುವ ನಗರದಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖ ಕೃಷ್ಣಜೀ ಜೋಶಿ ಹೇಳಿದರು.
ಗದಗಿನ ಕಿತ್ತೂರು ರಾಣಿ ಚೆನ್ನಮ್ಮ ನಗರದಲ್ಲಿ ಶನಿವಾರ ಸಂಜೆ ಜರುಗಿದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದೂಗಳು ಸಂವಿಧಾನ ಹಕ್ಕಿನ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ಅದರಲ್ಲಿ ನಾಗರಿಕ ಕರ್ತವ್ಯ ಮುಖ್ಯವಾಗಿದೆ ಎಂದರು.
ವಿಶ್ವದಲ್ಲಿ ನಾಗರಿಕತೆ ಇಲ್ಲದ ಸಂದರ್ಭದಲ್ಲಿ ಭಾರತದಲ್ಲಿ ನಾಗರಿಕ ಸಂಸ್ಕೃತಿ ಉಚ್ಚಾಯ ಸ್ಥಿತಿಯಲ್ಲಿತ್ತು. ಹಿಂದೂ ಸಮಾಜದಿಂದ ಭಾರತ ಜಗತ್ತಿಗೇ ಗುರುವಾಗಿತ್ತು. ಆದರೆ, 1093ರಲ್ಲಿ ಪೃಥ್ವಿರಾಜ ಚವ್ಹಾಣನನ್ನು ಸೋಲಿಸಿ ಮಹಮ್ಮದ ಘೋರಿ ದೆಹಲಿಯಲ್ಲಿ ಆಳ್ವಿಕೆ ಮಾಡಿದ. ಆದರೆ ಪೃಥ್ವಿರಾಜ ಚವ್ಹಾಣ ಸೋಲುವುದಕ್ಕೆ ಅವನ ಮಾವ ಜಯಚಂದನೇ ಕಾರಣ. ಅದೇ ರೀತಿ ಕಿತ್ತೂರು ಸಂಸ್ಥಾನದ ಆಳ್ವಿಕೆಯೂ ಕೊನೆಗೊಂಡಿತು. ಇತಿಹಾಸದಲ್ಲಿ ನಮ್ಮ ಅಧಃಪತನಕ್ಕೆ ಹಿಂದೂಗಳೇ ಕಾರಣ. ನಾವು ಹಿಂದೂ, ನಾವೆಲ್ಲ ಒಂದು ಎನ್ನುವುದು ಯಾವಾಗ ಎಂದು ಪ್ರಶ್ನಿಸಿದರಲ್ಲದೆ, ನಮ್ಮ ಸಮಾಜದಲ್ಲಿ ಗಟ್ಟಿತನ ಬೇಕು. ಗಟ್ಟಿತನವೇ ನಾವು ಭವಿಷ್ಯದಲ್ಲಿ ಹಿಂದೂಗಳಾಗಿ ಉಳಿಯಲು ಕಾರಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ತಾಯಿ ಮತ್ತು ಭೂಮಿಗೆ ಗೌರವ ನೀಡಬೇಕು. ಭರತ ಖಂಡಕ್ಕೆ ಅಗೌರವ ತೋರಿದರೆ ತಾಯಿಗೆ ಅಗೌರವ ತೋರಿದಂತೆ ಎಂದರು.
ಮುಕ್ಕಣ್ಣೆಶ್ವರ ಮಠದ ಶಂಕರಾನಂದ ಶ್ರೀಗಳು, ಅಡ್ನೂರು ಮಠದ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು, ಹಿಂದೂ ಸಮಾಜೋತ್ಸವ ಅಧ್ಯಕ್ಷ ಬಸವರಾಜ ಬಿಂಗಿ, ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಕೇಶವರಾಮ್ ಕೊಳ್ಳಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಎಸ್.ಪಿ, ಚಿನ್ಮಯಾನಂದ ಟೆಂಗಿನಕಾಯಿ, ಶಶಿಧರ ದಿಂಡೂರ, ರಘುನಾಥಸಾ ಮೆರವಾಡೆ, ರಾಜಣ್ಣ ಮಲ್ಲಾಡದ, ಮಂಜುನಾಥ ಕೊಟ್ನೆಕಲ್, ಚಂದ್ರಕಾಂತ ಚವ್ಹಾಣ, ಪ್ರೇಮಾ ಕಡೆಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ಶೈಲೇಶ್ ಬಾಗಮಾರ, ಹರೀಶ ಪೂಜಾರ, ರಾಜಶೇಖರ ಕುಂಬಿ, ನಾಗವೇಣಿ ಕಟ್ಟಿಮನಿ, ಡಾ. ಉಮೇಶ ಹಾದಿ, ಚಿನ್ಮಯಾನಂದ ಟೆಂಗಿನಕಾಯಿ ಮುಂತಾದವರಿದ್ದರು.
ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಡಾ.ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ನಗರದ ವೀರೇಶ್ವರ ಪುಣ್ಯಾಶ್ರಮ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಶೋಭಾಯಾತ್ರೆ ಆರಂಭವಾಗಿ ವೆಂಕಟೇಶ ಟಾಕೀಸ್ ರಸ್ತೆ, ಟ್ಯಾಗೋರ್ ರಸ್ತೆ, ಕಿತ್ತೂರಾಣಿ ಚೆನ್ನಮ್ಮ ರಸ್ತೆ, ಹಾತಲಗೇರಿ ನಾಕಾ, ಸಾಯಿಬಾಬಾ ದೇವಸ್ಥಾನದಿಂದ ಮಾಳೇಕೊಪ್ಪಮಠ ಅವರ ಬಯಲು ಜಾಗವರೆಗೆ ಸಂಚರಿಸಿತು. ದೇಶಭಕ್ತಿಗೀತೆಗಳೊಂದಿಗೆ ರಾಷ್ಟ್ರ ಭಕ್ತರ ಭವ್ಯ ಭಾವಚಿತ್ರದ ಮೆರವಣಿಗೆ ರೋಮಾಂಚನ ತರಿಸಿತು. ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಭಗವಾಧ್ವಜಗಳು, ಬ್ಯಾನರ್ಗಳಿಂದ ನಗರಕ್ಕೆ ನಗರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸಿತು. ಅವಳಿ ನಗರದ ವಿವಿಧ ಕಡೆ ಶೋಭಾಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.



