ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸತತ 4,399 ದಿನಗಳ ಆಡಳಿತ ಪೂರ್ಣಗೊಳಿಸುವ ಮೂಲಕ ದೇಶದ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯ ದಾಖಲೆಯನ್ನು ನಿರ್ಮಿಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ವೀರ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, 1952ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಜವಾಹರಲಾಲ್ ನೆಹರು 4,398 ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಆ ದಾಖಲೆಯನ್ನು ಹಿಂದಿಕ್ಕಿ ದೇಶದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ ಎಂದು ಹೇಳಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿ ಜಾರಿಗೆ ತಂದ ನೂರಾರು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿವೆ. ಮಹಿಳೆಯರು, ರೈತರು, ಯುವಕರು ಹಾಗೂ ಕಾರ್ಮಿಕರ ಬದುಕಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಮಹತ್ವದ ಬದಲಾವಣೆ ತಂದಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಸಂದರ್ಭೋಚಿತವಾಗಿ ಮಾತನಾಡಿದರು.
ಇದಕ್ಕೂ ಮುನ್ನ ವೀರ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಕ್ತರಿಗೆ ಸಿಹಿ ವಿತರಿಸಲಾಯಿತು. ನಂತರ ಪೇಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಎಸ್. ಕರೀಗೌಡ್ರ, ಮೋಹನ ಮಾಳಶೆಟ್ಟಿ, ಎಂ.ಎಮ್. ಹಿರೇಮಠ, ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ಭರತ್ ಬೊಮ್ಮಾಯಿ, ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
“ಪ್ರತಿ ದಿನ 18 ಗಂಟೆಗಳ ಕಾಲ ದುಡಿದು ಭಾರತವನ್ನು ವಿಶ್ವದ ನಾಲ್ಕನೇ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ”
ಬಸವರಾಜ ಬೊಮ್ಮಾಯಿ, ಸಂಸದ



