ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಉಭಯಕವಿ ಶರಭ ಭೇರುಂಡ ಶ್ರೀ ರಾಘವಾಂಕ ಕವಿ ವಿರಚಿತ ಶ್ರೀ ಸೋಮನಾಥನ ಚರಿತ್ರೆ ಪುರಾಣ ಕಾರ್ಯಕ್ರಮವನ್ನು ಭಕ್ತ ಸಮೂಹ ಅತ್ಯಂತ ಶೃದ್ಧೆ-ಭಕ್ತಿ ಮತ್ತು ಸಾಂಪ್ರದಾಯಿಕವಾಗಿ ನಡೆಸುತ್ತಿದೆ.
ಸೋಮವಾರದ ಪುರಾಣದಲ್ಲಿ ಶಿವಭಕ್ತ ಆದಯ್ಯ ಸೌರಾಷ್ಟçದಿಂದ ಶ್ರೀ ಸೋಮೇಶ್ವರನನ್ನು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ತಂದು ಪ್ರತಿಷ್ಠಾಪಿಸುವ ಸನ್ನಿವೇಶಗಳನ್ನು ಪುರಾಣ ಪ್ರವಚನಕಾರರು ಭಕ್ತರ ಮನ ಮುಟ್ಟುವಚಿತೆ ಹೇಳಿದರು. ಈ ಹಿನ್ನೆಲೆಯಲ್ಲಿ ಪುರಾಣದಲ್ಲಿ ಅಂದಿನ ಕಾಲದಲ್ಲಿ ನಡೆದ ಅದ್ದೂರಿ ಪ್ರತಿಷ್ಠಾಪನೆ, ಕ್ಷೀರಾಭಿಷೇಕ, ರುದ್ರಾಭಿಷೇಕಗಳನ್ನು ಸೋಮವಾರ ಭಕ್ತ ಸಮೂಹವೆಲ್ಲ ಸಂಭ್ರಮದಿಂದ ನೆರವೇರಿಸಿದರು.
ಅಭಿಷೇಕಕ್ಕಾಗಿ ಭಕ್ತರು ನೂರಾರು ಬಿಂದಿಗೆ ಹಾಲು, ಜೇನುತುಪ್ಪ, ಮೊಸರು, ಸಕ್ಕರೆ, ಹಣ್ಣು ಹಂಪಲ, ಅರ್ಪಿಸಿದ್ದರು. ಸಂಧ್ಯಾಕಾಲ ಮಂತ್ರಘೋಷಗಳ ನಡುವೆ ಶ್ರೀ ಸೋಮೇಶ್ವರನಿಗೆ ಕ್ಷೀರಾಭೀಷೇಕ, ರುದ್ರಾಭಿಷೇಕ ನಡೆಯಿತು. ಈ ವೈಶಿಷ್ಟಪೂರ್ಣ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಸೇವೆ ಸಮರ್ಪಿಸಿದರು. ದೇವಸ್ಥಾನದ ಅಕ್ಕ ಪಕ್ಕದ ನೂರಾರು ಭಕ್ತ ಮಹಿಳೆಯರೇ ಸೇರಿ ಸಾವಿರಾರು ಹೋಳಿಗೆಗಳನ್ನು ಸಿದ್ಧಪಡಿಸಿದ್ದರು. ವೈಭವಪೂರ್ಣ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಮತ್ತು ಪುರಾಣ ಶ್ರವಣ ಮಾಡಲು ಆಗಮಿಸಿದ್ದ ಸಾವಿರಾರು ಭಕ್ತರಿಗೆ ಹೋಳಿಗೆ ಊಟವನ್ನು ಉಣಬಡಿಸಿದರು.
ಶ್ರಾವಣ ಮಾಸದುದ್ದಕ್ಕೂ ನಡೆಯಲಿರುವ ಪುರಾಣ ಕಾರ್ಯಕ್ರಮದಲ್ಲಿ ಸೋಮೇಶ್ವರ ಪುರಾಣ ಸಮಿತಿ ಸದಸ್ಯರು, ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಸಮಿತಿ, ಜಾತ್ರಾ ಕಮಿಟಿ ಹಾಗೂ ಅನೇಕ ಮುಖಂಡರು, ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಅಪಾರ ಪ್ರಮಾಣದಲ್ಲಿ ಸೇರಿದ್ದ ಭಕ್ತರಿಗೆ ಸೋಮೇಶ್ವರ ಚರಿತ್ರೆಯನ್ನು ಶ್ರವಣ ಮಾಡುವ ಭಾಗ್ಯ ದೊರಕಿಸಿದ ಪುರಾಣ ಸಮಿತಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಪುರಾಣಕ್ಕೆ ಭಕ್ತರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಅರ್ಚಕ ಸೋಮನಾಥ ಪೂಜಾರ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ವಿರೂಪಾಕ್ಷಪ್ಪ ಗವಾಯಿಗಳು ಪುರಾಣ ಪಠಣಗೈದರೆ, ಎಸ್.ಎಫ್. ಆದಿ ಪುರಾಣ ಪ್ರವಚನ ಮಾಡುತ್ತಿದ್ದು, ಕಳಕಪ್ಪ ಮುದ್ನಾಪುರ ತಬಲಾ ಸಾಥ್ ನೀಡುತ್ತಿದ್ದಾರೆ.