ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ : ಅಂದಾನಯ್ಯ

0
pressmeet
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೋಮುವಾದಿ ಪಕ್ಷದ ಜೊತೆ ಮೈತ್ರಿ ಹಾಗೂ ಕುಮಾರಸ್ವಾಮಿ ಅವರ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಲಾಗಿದೆ. ಇಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.

Advertisement

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ. ಮೈತ್ರಿಗೂ ಮುನ್ನ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರ ಅಭಿಪ್ರಾಯ ಪಡೆಯದೆ ಕುಮಾರಸ್ವಾಮಿ ಅವರು ಏಕಪಕ್ಷೀಯ ನಿರ್ಧಾರ ತಳೆದಿದ್ದಾರೆ. ಇದರಿಂದ ಜೆಡಿಎಸ್‌ನ ಜಿಲ್ಲೆಯ ಪ್ರಾಮಾಣಿಕ ಕಾರ್ಯಕರ್ತರು ಬೇಸತ್ತು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದಾರೆ. ಭವಿಷ್ಯದಲ್ಲಿ ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳಬೇಕು ಎನ್ನುವ ಕುರಿತು ಸಭೆ ನಡೆಸಿ ನಿರ್ಧರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆದರೆ ಅದನ್ನು ಅಂಗೀಕರಿಸಲಿಲ್ಲ. ಮಾಜಿ ಸಚಿವರೊಬ್ಬರು ಮಧ್ಯಪ್ರವೇಶ ಮಾಡಿ, ಬರ ಅಧ್ಯಯನಕ್ಕೆ ತಂಡ ಆಗಮಿಸುವ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಲಾಗುವುದು, ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಘಟಕ ರಚಿಸುವುದಾಗಿ ಹೇಳಿದ್ದರು. ಆದರೆ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಅಧ್ಯಕ್ಷರನ್ನು ನೇಮಿಸಿದರು. ಅಂದಿನಿಂದ ನಾವೆಲ್ಲಾ ತಟಸ್ಥರಾಗಿ ಉಳಿದಿದ್ದು, ಈಗ ಹೊಸ ರಾಜಕೀಯ ನಡೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಂ.ಆರ್. ಸೋಂಪುರ, ಪ್ರಭುರಾಜಗೌಡ ಪಾಟೀಲ, ಪದ್ಮರಾಜ ಪಾಟೀಲ, ನಜೀರ್ ಡಂಬಳ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

1999ರಿಂದಲೂ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದ್ದೇವೆ. ಈ ಅವಧಿಯಲ್ಲಿ ಅನೇಕ ಜನ ಜೆಡಿಎಸ್ ಸೇರ್ಪಡೆಯಾಗಿ ಅಧಿಕಾರ ಅನುಭವಿಸಿ ಪಕ್ಷಾಂತರ ಮಾಡಿದರು. ಅವರ ಜೊತೆ ಅನೇಕ ಕಾರ್ಯಕರ್ತರನ್ನು ಕರೆದೊಯ್ದರು. ಆದರೆ ಪ್ರಾಮಾಣಿಕ ಕಾರ್ಯಕರ್ತರಾದ ನಾವು ಜೆಡಿಎಸ್‌ನಲ್ಲಿಯೇ ಉಳಿದಿದ್ದೇವೆ.

ಆದರಿಂದು ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಮೈತ್ರಿಯಿಂದಾಗಿ ಉತ್ತರ ಕರ್ನಾಟಕ ಭಾಗದ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂದು ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.


Spread the love

LEAVE A REPLY

Please enter your comment!
Please enter your name here