ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ಮೋಸ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿ ದೀಪಾ ಅವಟಗಿ (33). ಫ್ಯಾಶನ್ ಡಿಸೈನರ್ ಆಗಿರುವ ಆಕೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ, ಬಳಿಕ ಅವರನ್ನು ಲಾಡ್ಜ್ಗೆ ಕರೆಸಿ ಹಣ ಮತ್ತು ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಮಾಹಿತಿ ಪ್ರಕಾರ, ದೀಪಾ ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ನಂತರ ಮೊಬೈಲ್ ಮೂಲಕ ಸಂಪರ್ಕ ಬೆಳೆಸುತ್ತಿದ್ದಳು. ಆಕೆಯನ್ನು ನಂಬಿ ಲಾಡ್ಜ್ಗೆ ಬಂದ ವ್ಯಕ್ತಿಗಳೊಂದಿಗೆ ಸಲುಗೆಯಿಂದ ವರ್ತಿಸಿ, ಅವರನ್ನು ಸ್ನಾನಕ್ಕೆ ಕಳುಹಿಸುವುದು ಆಕೆಯ ತಂತ್ರವಾಗಿತ್ತು. ಇದೇ ವೇಳೆ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕೆಲ ಸಂದರ್ಭಗಳಲ್ಲಿ ಕಾರುಗಳನ್ನೂ ಕೊಂಡೊಯ್ದು ಪರಾರಿಯಾಗುತ್ತಿದ್ದಳು.
ಈ ಪ್ರಕರಣದಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದ ಶಿವಾನಂದ ಮಠಪತಿ ಎಂಬಾತ ಪರಾರಿಯಾಗಿದ್ದು, ಅವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶ್ರೀಮಂತ ವ್ಯಕ್ತಿಗಳ ಮಾಹಿತಿ ಒದಗಿಸುವಲ್ಲಿ ಅವನು ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಯಿಂದ ಸುಮಾರು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್ಗಳು, ಒಂದು ಟ್ಯಾಬ್, ಒಂದು ಡೊಂಗಲ್, 3 ಕಾರಿನ ಕೀಗಳು ಹಾಗೂ 14 ಸಾವಿರ ರೂ. ನಗದು ಸೇರಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



