ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾರಹುಣ್ಣಿಮೆ ಮುನ್ನಾದಿನ ಗುರುವಾರ ಸಂಜೆ ಹೊನ್ನುಗ್ಗಿ ಹಬ್ಬವನ್ನು ಲಕ್ಷ್ಮೇಶ್ವರ ಸೇರಿ ತಾಲೂಕಿನಾದ್ಯಂತ ಎಲ್ಲ ಕುಟುಂಬದವರು ನೆರೆಹೊರೆಯವರೊಡಗೂಡಿ ತಮ್ಮ ಜೀವನಾಡಿ ಎತ್ತುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಸಂಪ್ರದಾಯ ಮೆರೆದರು.
ಹೊನ್ನುಗ್ಗಿ ಪ್ರಯುಕ್ತ ರೈತರು ಸಂಜೆ ಮನೆಯೊಳಗೆ ತಮ್ಮ ಎತ್ತುಗಳ ಮುಂಗಾಲನ್ನು ಕರಿ ಕಂಬಳಿ ಮೇಲೆ ನಿಲ್ಲಿಸಿ ಬಂಗಾರವನ್ನು ಎತ್ತಿನ ಕಾಲುಗಳಿಗೆ ಮುಟ್ಟಿಸಿ ಶೃದ್ಧಾ ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ಎತ್ತುಗಳ ಕೋಡುಗಳಿಗೆ ಚಕ್ಕುಲಿ, ಕೋಡಬಳೆ ಸರ ಮಾಡಿ ಕಟ್ಟಿ, ಮುತೈದೆಯರನ್ನು ಕರೆದು ಆರತಿ ಮಾಡಿ ಪೂಜಿಸುತ್ತಾರೆ. ವರ್ಷವಿಡೀ ಹೊನ್ನುಗ್ಗಿ (ಬಂಗಾರ+ಹುಗ್ಗಿ)ಯಂತೆ ಫಸಲು ಕೈಸೇರಿ ವ್ಯವಸಾಯದಿಂದ ಹಸನಾದ ಬದುಕು ರೈತರದ್ದಾಗಲಿ, ಅದಕ್ಕೆ ಬಸವಣ್ಣನ ಆಶೀರ್ವಾದವಿರಲಿ ಎಂದು ಪ್ರಾರ್ಥಿಸುತ್ತಾರೆ. ಬಳಿಕ ಮನೆಯ ಎಲ್ಲ ಎತ್ತು-ಹಸುಗಳಿಗೂ ಅಕ್ಕಿಹುಗ್ಗಿ, ಜೋಳದ ಕಿಚಡಿ ಪ್ರಸಾದವೀಯುತ್ತಾರೆ. ಬಳಿಕ ನೆರೆಹೊರೆ, ಬಂಧು-ಬಾಂಧವರೊಡಗೂಡಿ ಎಲ್ಲರೂ ಪ್ರಸಾದ ಸ್ವೀಕರಿಸುತ್ತಾರೆ.