ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಂ.ಪಂಚಾಕ್ಷರ ಕವಿ ಗವಾಯಿಗಳು ಸ್ಥಾಪಿಸಿದ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ ರಂಗಭೂಮಿ ಕಲೆಯನ್ನು ಚಿರನೂತನಗೊಳಿಸಿದೆ. ಈ ನಾಟ್ಯ ಸಂಘದಲ್ಲಿ ಮಹಿಳೆಯರ ಪಾತ್ರವನ್ನು ಪುರುಷ ಕಲಾವಿದರೇ ಅಭಿನಯಿಸುವ ಮೂಲಕ ನಾಟ್ಯ ಕಲೆಯನ್ನು ಜೀವಂತವಾಗಿಸಿದ್ದಾರೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ಪಟ್ಟಣದಲ್ಲಿ ತಮ್ಮ 54ನೇ ಜನ್ಮದಿನದ ನಿಮಿತ್ತ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕವಿ ಪಂ.ಪುಟ್ಟರಾಜ ಗವಾಯಿಗಳವರು ಹುಟ್ಟುಹಾಕಿದ ಈ ರಂಗಭೂಮಿಯಿಂದ ಇಂದು ಅಂಧ, ಅನಾಥ, ದೀನ-ದಲಿತರ, ಬಡ ಮಕ್ಕಳ ಉದ್ಧಾರಕ್ಕಾಗಿ ನಾಡಿನಾದ್ಯಾಂತ ಸಂಚರಿಸುತ್ತಾ ಯಶಸ್ವಿ ಪ್ರದರ್ಶನ ನೀಡುತ್ತಾ ಮಕ್ಕಳ ಬಾಳಿಗೆ ಬೆಳಕು ನೀಡುತ್ತಿದ್ದಾರೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸಿನಿಮಾಗಳ ಪ್ರದರ್ಶನಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೂ, ಪಂ.ಪುಟ್ಟರಾಜ ಕವಿಗವಾಯಿಗಳು ಸ್ಥಾಪಿಸಿದ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ ರಂಗಭೂಮಿ ಮುಳಗುಂದ ಪಟ್ಟಣದಲ್ಲಿ ಸತತ 10 ತಿಂಗಳಗಳ ಕಾಲ ನಾಟಕ ಪ್ರರ್ಶಿಸುತ್ತಿದೆ. ನಾಟ್ಯಕಲೆಯ ಶ್ರೇಷ್ಠತೆಯನ್ನು ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ರಂಗಭೂಮಿ ಕಲೆ ಉಳಿಸಬೇಕು ಹಾಗೂ ಬೆಳೆಸಬೇಕು ಎಂದರು.
ಪ.ಪಂ ಸದಸ್ಯ ಕೆ.ಎಲ್. ಕರಿಗೌಡರ, ಮಾಹಾಂತೇಶ ನೀಲಗುಂದ, ಮಾಹಾದೇವಪ್ಪ ಗಡಾದ, ಅಶೋಕ ಹುಣಶಿಮರದ, ಬಿ.ವಿ. ಸುಂಕಾಪೂರ, ಚಿಕ್ಕಪ್ಪ ದೇವರಮನಿ, ಚಂದ್ರು ಕ್ಷೌರದ, ರಂಗಭೂಮಿಯ ಕಲಾವಿದರು ಇದ್ದರು.