ಗದಗ: ಜಿಲ್ಲೆಯ ಮುನ್ಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಯುವಕರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಶಿವಪ್ಪ ಪಾಟ್ಲಿ (35), ಮುತ್ತಪ್ಪ ಮುದುಗಣ್ಣವರ್ (32) ಹಾಗೂ ಆನಂದ ಲಕ್ಷ್ಮೇಶ್ವರಮಠ (29) ಎಂದು ಗುರುತಿಸಲಾಗಿದೆ. ಮೂವರೂ ಜಂತ್ಲಿ ಗ್ರಾಮದ ನಿವಾಸಿಗಳಾಗಿದ್ದರು.
ಮುನ್ಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮಕ್ಕೆ ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದೇ ವೇಳೆ ಡೋಣಿ ಗ್ರಾಮದಿಂದ ಮುನ್ಡರಗಿ ಮಾರ್ಗವಾಗಿ ಹಿರೇಹಡಗಲಿ ಕಡೆಗೆ ಕಾರು ತೆರಳುತ್ತಿತ್ತು.
ಬೈಕ್ ಸವಾರರು ಅತಿವೇಗ ಹಾಗೂ ಬೇಜವಾಬ್ದಾರಿ ಚಾಲನೆ ಮಾಡುತ್ತಿದ್ದ ಕಾರಣ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶಿವಪ್ಪ ಮತ್ತು ಆನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮುತ್ತಪ್ಪನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮುನ್ಡರಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.



