ಬೆಂಗಳೂರು: ಮುಂಜಾನೆಯ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ವೊಂದು ಕಾಲುವೆಗೆ ಉರುಳಿದ ಘಟನೆ ಬೆಂಗಳೂರಿನ ಕಾಡುಬಿಸನಹಳ್ಳಿಯಲ್ಲಿ ನಡೆದಿದೆ.

ಬಸ್ನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನವೆಂಬರ್ 10ರಂದು ಮುಂಜಾನೆ ಸುಮಾರು 4.30ರ ವೇಳೆಗೆ ಸಿಲ್ಕ್ ಬೋರ್ಡ್ನಿಂದ ಕಾಡುಬಿಸನಹಳ್ಳಿ ಕಡೆಗೆ ಖಾಸಗಿ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬಸ್ನ ಮುಂಭಾಗದ ಬಲಭಾಗದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಗೆ ಸ್ಕಿಡ್ ಆಗಿ ಕಾಲುವೆಯೊಳಗೆ ಬಿದ್ದಿದೆ.
ಅಪಘಾತ ಸಂಭವಿಸಿದಾಗ ಬಸ್ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದರು. ಬಸ್ ಕಾಲುವೆಗೆ ಉರುಳುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಹೊರಬರಲು ಪರದಾಡಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಅಪಘಾತದ ರಭಸಕ್ಕೆ ಚಾಲಕ ಸ್ಟೇರಿಂಗ್ ಭಾಗದಲ್ಲಿ ಸಿಲುಕಿಕೊಂಡಿದ್ದಾನೆ. ಹೊರಬರಲು ಸಾಧ್ಯವಾಗದೆ ಪರದಾಡುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.
ಮುಂಜಾನೆಯ ವೇಳೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.










