ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಸೈಬರ್ ಕ್ರೈಂ ತಂಡದ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ರಾಜ್‌ಗಢ ಜಿಲ್ಲೆಯ ಬಿಯೋರಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಇಂದೋರ್‌ಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಎತ್ತರದ ಸೇತುವೆಗೆ ಡಿಕ್ಕಿ ಹೊಡೆದು ಉರುಳಿದೆ.
ಭೋಪಾಲ್ ಬೈಪಾಸ್‌ನ ಸೇತುವೆಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಪ್ರಯಾಣಿಕರು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಸುಮಾರು 30 ಅಡಿ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಮೃತರಲ್ಲಿ ಬೆಂಗಳೂರು ಸೈಬರ್ ಕ್ರೈಂ ತಂಡದ ಇನ್‌ಸ್ಪೆಕ್ಟರ್ ರವಿ ಕೆ.ವಿ. ಕೂಡ ಸೇರಿದ್ದಾರೆ. ಬಸ್ ಚಾಲಕ ವಿಕಾಸ್ ಶುಕ್ಲಾ, ಬೆಲಾಲ್ ಅಲಿ ಹಾಗೂ ಜ್ಯೋತಿರಾದಿತ್ಯ ಸಿಂಗ್ ಗೌಡ್ ಕೂಡ ಮೃತಪಟ್ಟಿದ್ದಾರೆ.
ಸೈಬರ್ ಕ್ರೈಂ ತಂಡ ಆರೋಪಿಯೊಬ್ಬನನ್ನು ಪತ್ತೆಹಚ್ಚಲು ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ತಂಡದ ಸಬ್‌ಇನ್‌ಸ್ಪೆಕ್ಟರ್ ರಮೇಶ್ ನಾಯಕ್, ಎಎಸ್‌ಐ ಶ್ರೀನಿವಾಸ್ ಹಾಗೂ ತಾಂತ್ರಿಕ ಸಿಬ್ಬಂದಿ ವಿಶ್ವನಾಥ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ.
ಬಸ್‌ನಲ್ಲಿದ್ದ ಉತ್ತರ ಪ್ರದೇಶ ಮೂಲದ ಪ್ರಯಾಣಿಕರಿಗೂ ಗಾಯಗಳಾಗಿವೆ. ಅಮಿತ್ ಕುಮಾರ್ ಪ್ರತಾಪ್, ವಿನೋದ್ ಕುಮಾರ್ ಸಿಂಗ್, ಮೀನು ಸಿಂಗ್, ರಕ್ಷಿತ್ ಸಿಂಗ್, ಸುರೇಂದ್ರ ಪ್ರತಾಪ್ ಸಿಂಗ್, ರವಿ ಶರ್ಮಾ, ಎಂಟು ವರ್ಷದ ಪಾರ್ಥ್ ಶರ್ಮಾ, ಸುಮನ್ ಶರ್ಮಾ, ಕೇಶವ್, ರಮೇಶ್ ನಾಯಕ್, ಸೋನು ಹಾಗೂ ವಿಶ್ವನಾಥ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡಿರುವ ಸುರೇಂದ್ರ ಪ್ರತಾಪ್ ಸಿಂಗ್, ಸುಮನ್ ಶರ್ಮಾ ಹಾಗೂ ಶ್ರೀನಿವಾಸ್ ಅವರನ್ನು ಭೋಪಾಲ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.



