ಬೆಂಗಳೂರು: ನಗರದ ಕೋರಮಂಗಲದ ತಾವರೆಕೆರೆ ಬಳಿಯ ಎಸ್.ಜಿ.ಪಾಳ್ಯದಲ್ಲಿ ಭೀಕರ ದುರಂತ ನಡೆದಿದ್ದು. 14 ವರ್ಷದ ಮಗನನ್ನು ಕೊಂದು ಬಳಿಕ ತಾಯಿ ಮತ್ತು ಅಜ್ಜಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮಗ ಮೌನೀಶ್(14), ತಾಯಿ ಸುಧಾ, ಅಜ್ಜಿ ಮುದ್ದಮ್ಮ ಮೃತರು. ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೊದಲು ಅಮ್ಮ-ಮಗಳು ಸೇರಿಕೊಂಡು ಬಿರಿಯಾನಿ ವ್ಯಾಪಾರ ಮಾಡುತ್ತಿದ್ರು, ಬಳಿಕ ಚಿಪ್ಸ್ ವ್ಯಾಪಾರ ಮಾಡುತ್ತಿದ್ರು. ಇದೆರಡರಲ್ಲೂ ನಷ್ಟ ಉಂಟಾಗಿ ಸಾಲವಾಗಿತ್ತು. ನಂತ್ರ ಹಾಲು ವ್ಯಾಪಾರ ಮಾಡ್ತಾ ಇದ್ದ ಅಜ್ಜಿ ಮಾದಮ್ಮ ಹಾಗೂ ಮಗಳು ಸುಧಾ, ತುಂಬಾ ಸಾಲವಾದ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.
ಸುಧಾ ಅವರು ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ತಾಯಿ ಮುದ್ದಮ್ಮ ಜೊತೆಗೆ ಸುಧಾ ಮತ್ತು ಮೌನೀಶ್ ವಾಸಿಸುತ್ತಿದ್ದರು. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ನೋಟ್ ಅಥವಾ ಬೇರೆ ಏನಾದರೂ ಇದೆಯಾ ಎಂದು ಪರಿಶೀಲನೆ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.



