ಮಡಿಕೇರಿ: ಶುಂಠಿ ಕೀಳಲು ತೆರಳಿದ್ದ ಮಹಿಳೆಯೊಬ್ಬರು ಹಳೆಯ ಶೌಚಾಲಯದ ಗುಂಡಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಮುಂದಾದ ವ್ಯಕ್ತಿಯೂ ವಿಷಕಾರಿ ಅನಿಲದ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ನಿತ್ಯ (46) ಹಾಗೂ ಜನಾರ್ದನ (43) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ನಿತ್ಯ ಅವರು ಮನೆಗೆ ಅಗತ್ಯವಿದ್ದ ಶುಂಠಿ ತರಲು ಸಂಬಂಧಿಕರ ಮನೆಗೆ ತೆರಳಿದ್ದರು. ಬಳಿಕ ಗದ್ದೆಯಿಂದ ಶುಂಠಿ ತೆಗೆದುಕೊಂಡು ಬರುವುದಾಗಿ ಹೇಳಿ ಗದ್ದೆಯತ್ತ ತೆರಳಿದ್ದಾರೆ. ಈ ವೇಳೆ ಗದ್ದೆ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದ ಪರಿಣಾಮ ನಿತ್ಯ ಅವರು ಗುಂಡಿಯೊಳಗೆ ಬಿದ್ದಿದ್ದಾರೆ.
ಇದನ್ನು ಗಮನಿಸಿದ ಜನಾರ್ದನ ಅವರು ನಿತ್ಯ ಅವರನ್ನು ರಕ್ಷಿಸಲು ಗುಂಡಿಯೊಳಗೆ ಇಳಿದಿದ್ದಾರೆ. ಆದರೆ, ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಡಿಕೇರಿ ಶಾಸಕ ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



