ಉಡುಪಿ: ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ಘೋರ ದುರಂತವೊಂದು ನಡೆದಿದೆ. ನೇಣುಬಿಗಿದುಕೊಂಡು ಅಣ್ಣ-ತಂಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮಲ್ಲೇಶ್(23) ಮತ್ತು ಪವಿತ್ರಾ(17) ಮೃತ ದುರ್ಧೈವಿಗಳಾಗಿದ್ದು,
ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಬೇರೊಂದು ಮನೆಯಲ್ಲಿ ಕೆಲಸ ಮಾಡಿ , ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ ಓದುತ್ತಿದ್ದರು. ಸಹೋದರ ಸಂಬಂಧಿ ಮಲ್ಲೇಶ ವಾರದ ಹಿಂದಷ್ಟೇ ಗಾರೆ ಕೆಲಸಕ್ಕೆ ಎಂದು ಉಡುಪಿಗೆ ಬಂದಿದ್ದ.
ತನ್ನ ತಾಯಿ ಮತ್ತು ಪವಿತ್ರಾ ತಾಯಿ ಹನುಮವ್ವ ಅಕ್ಕ-ತಂಗಿಯಾಗಿರುವ ಕಾರಣ ಚಿಕ್ಕಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ. ಹನುಮವ್ವ ರಾಯಚೂರಿಗೆ ಹೋಗಿದ್ದ ಸಂದರ್ಭ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದ್ದು, ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.