ವಿಜಯಸಾಕ್ಷಿ ಸುದ್ದಿ, ನರೇಗಲ್ : ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಅವಳನ್ನು ಕೊಂದ ಪೈಶಾಚಿಕ ಘಟನೆಯನ್ನು ಖಂಡಿಸಿ ಶನಿವಾರ ನರೇಗಲ್ ಪಟ್ಟಣದ ಎಲ್ಲ ವೈದ್ಯರು ತಮ್ಮ ಆಸ್ಪತ್ರೆಗಳ ಒಪಿಡಿಗಳನ್ನು ಬಂದ್ ಮಾಡಿ ಭಾರತೀಯ ವೈದ್ಯರ ಸಂಘದವರು ನೀಡಿದ ಬಂದ್ ಕರೆಯನ್ನು ಬೆಂಬಲಿಸಿದರು.
ವೈದ್ಯರು ದಿನದ 24 ಗಂಟೆಯೂ ಆರೋಗ್ಯ ಸೇವೆ ನೀಡುತ್ತಾರೆ. ಸೇವೆ ನೀಡುವ ವೈದ್ಯರಿಗೇ ರಕ್ಷಣೆ ಇಲ್ಲವೆಂದ ಮೇಲೆ ಜನತೆಗೆ ಸೇವೆ ನೀಡುವುದಾದರೂ ಹೇಗೆ ಎಂಬುದು ವೈದ್ಯರ ಪ್ರಶ್ನೆಯಾಗಿದೆ. ವೈಯಕ್ತಿಕವಾಗಿ ಹಾಗೂ ದವಾಖಾನೆಯ ಮೇಲೆ ಹಲ್ಲೆ ಮಾಡುವ ಅನೇಕ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದರಿಂದ ಕೇಸ್‌ಗಳನ್ನು ಹಿಡಿಯಲು ವೈದ್ಯರು ಹೆದರುವಂತಾಗಿದೆ.
ರೋಗಿಯನ್ನು ಉಪಚರಿಸಲು ವೈದ್ಯರಿಗೇನೂ ತೊಂದರೆಯಿಲ್ಲ. ಆದರೆ, ಉಗುರಿನಿಂದ ಹೋಗುವದಕ್ಕೆ ಕೊಡಲಿಯನ್ನು ತೆಗೆದುಕೊಳ್ಳುವ ಜನರಿರುವ ಈ ಕಾಲದಲ್ಲಿ ಜನ ಸೇವೆ ಮಾಡುವ, ರೋಗಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಭಾರತೀಯ ವೈದ್ಯರ ಸಂಘವು ಹಲವಾರು ಬಾರಿ ಸರಕಾರಗಳಿಗೆ ಮನವಿ ಮಾಡಿ ವೈದ್ಯರಿಗೆ ಮತ್ತು ಅವರ ಆಸ್ಪತ್ರೆಗೆ ರಕ್ಷಣೆ ನೀಡಿ, ಪುಂಡಾಟಿಕೆ ಎಸಗುವವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಹೇಳುತ್ತಿದ್ದರೂ, ನಮ್ಮ ಮಾತಿಗೂ ಬೆಲೆ ಇಲ್ಲದಾಗಿದೆ ಎನ್ನುತ್ತಾರೆ ಪಟ್ಟಣದ ಖ್ಯಾತ ವೈದ್ಯ ಡಾ. ಕೆ.ಬಿ. ಧನ್ನೂರ.
ಪಟ್ಟಣದ ಇನ್ನೋರ್ವ ಖ್ಯಾತ ವೈದ್ಯ ಡಾ. ಜಿ.ಕೆ. ಕಾಳೆ ಮಾತನಾಡಿ, ತರಬೇತಿ ಹಂತದಲ್ಲಿದ್ದ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಈ ಅಮಾನುಷ ಕೃತ್ಯವನ್ನು ಇಡೀ ನರೇಗಲ್ಲದ ವೈದ್ಯ ಬಳಗ ತೀವ್ರವಾಗಿ ಖಂಡಿಸುತ್ತದೆ. ಇವು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಗಳಾಗಿವೆ. ಇದರಲ್ಲಿ ಯಾರೂ ರಾಜಕೀಯ ಎರಚಾಟ ಮಾಡದೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಕೊಲ್ಕೊತ್ತಾದ ವೈದ್ಯ ವಿದ್ಯಾರ್ಥಿನಿ ಮೆಲೆ ನಡೆದ ಘಟನೆಯನ್ನು ಖಂಡಿಸಿ ತಾವು ನಡೆಸಿದ ಒಪಿಡಿ ಬಂದ್‌ಗೆ ಬೆಂಬಲಿಸಿದ ಪಟ್ಟಣದ ಔಷಧಿ ವ್ಯಾಪಾರಿಗಳನ್ನು ತಾವು ಹೃತ್ಪೂರ್ವಕವಾಗಿ ಅಭಿನಂದಿಸಿ, ಧನ್ಯವಾದಗಳನ್ನು ಅರ್ಪಿಸುವುದಾಗಿ ಪಟ್ಟಣದ ಡಾ. ಕೆ.ಬಿ. ಧನ್ನೂರ, ಡಾ. ಜಿ.ಕೆ. ಕಾಳೆ, ಡಾ. ಡ್ಯಾನಿಯಲ್ ಫ್ರೆಡ್ರಿಕ್ಸ್, ಡಾ. ಶಿವಯ್ಯ ರೋಣದ, ಡಾ. ಆರ್.ವಿ. ಅಂಗಡಿ, ಡಾ. ರಡ್ಡೇರ ಇನ್ನೂ ಅನೇಕ ವೈದ್ಯರು ಹೇಳಿದರು.
ವೈದ್ಯರ ಮೇಲೆ ಮತ್ತು ವೈದ್ಯರ ಸ್ವತ್ತುಗಳ ಮೇಲೆ ನಡೆಯುತ್ತಿರುವ ಪುಂಡಾಟಿಕೆಯನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಭಾರತೀಯ ವೈದ್ಯರ ಸಂಘದವರು ಇಂದು ನೀಡಿರುವ ಕರೆಯನ್ನು ಬೆಂಬಲಿಸಿ ನಾವು ನಮ್ಮ ಒಪಿಡಿಗಳನ್ನು ಬಂದ್ ಮಾಡಿದ್ದೇವೆ. ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಸರಕಾರಗಳು ತೀವ್ರ ಎಚ್ಚರಿಕೆಯನ್ನು ವಹಿಸಿ ದೇಶದ ಎಲ್ಲ ವೈದ್ಯರಿಗೆ, ವೈದ್ಯ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಡಾ. ಕಾಳೆ ಆಗ್ರಹಿಸಿದರು.