ತುಮಕೂರು:- ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷವೇ ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಬೆಸ್ಕಾಂ ಸೂಚನೆ ನೀಡಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ ಎನ್ನುವ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸದೇ ಉಳಿಸಿಕೊಂಡಿವೆ. ಕಳೆದ ನವೆಂಬರ್ ಅಂತ್ಯದೊಳಗೆ ಬಿಲ್ ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿದುಬಂದಿದೆ.
ತಿಂಗಳುಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬೆಸ್ಕಾಂ ಖಡಕ್ ಎಚ್ಚರಿಕೆ ನೀಡಿದೆ. ಸಾಮಾನ್ಯ ಜನರಿಗೆ ನಿಯಮ ಕಟ್ಟುನಿಟ್ಟಾಗಿ ಅನ್ವಯಿಸುವ ಸರ್ಕಾರದ ಇಲಾಖೆಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಪ್ರಮುಖ ಇಲಾಖೆಗಳು:
ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.
ಸಣ್ಣ ನೀರಾವರಿ ಇಲಾಖೆ – 12.72 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 3.63 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ – 2.65 ಕೋಟಿ ರೂ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ – 1.85 ಕೋಟಿ ರೂ.
ಕಂದಾಯ ಮತ್ತು ಮುಜರಾಯಿ ಇಲಾಖೆ – 1.44 ಕೋಟಿ ರೂ.
ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆ – 1.09 ಕೋಟಿ ರೂ.
ತೋಟಗಾರಿಕೆ ಇಲಾಖೆ – 37 ಲಕ್ಷ ರೂ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – 34 ಲಕ್ಷ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 31 ಲಕ್ಷ ರೂ.
ಗೃಹ ಇಲಾಖೆ – 23 ಲಕ್ಷ ರೂ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – 11.97 ಲಕ್ಷ ರೂ.
ಲೋಕೋಪಯೋಗಿ ಇಲಾಖೆ – 7.56 ಲಕ್ಷ ರೂ.
ಕಾನೂನು ಇಲಾಖೆ – 6.11 ಲಕ್ಷ ರೂ.
ಅರಣ್ಯ ಇಲಾಖೆ – 8 ಲಕ್ಷ ರೂ.
ಇತರೆ ಇಲಾಖೆಗಳನ್ನು ಸೇರಿಸಿ ಒಟ್ಟು ಬಾಕಿ ಮೊತ್ತ 44.05 ಕೋಟಿ ರೂ.



