ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಕಟೌಟ್‌ಗಳು ಕುಸಿದು ಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುವ ವೇಳೆ ಕಾಂಗ್ರೆಸ್ ಪಕ್ಷದಿಂದ ರಸ್ತೆ ಪಕ್ಕಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ನಾಯಕರ ದೊಡ್ಡ ಗಾತ್ರದ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಬೆಳಗ್ಗೆ ಅಚಾನಕವಾಗಿ ಸಿಎಂ ಹಾಗೂ ಸಚಿವ ಜಮೀರ್ ಅವರ ಕಟೌಟ್‌ಗಳು ಮುರಿದು ಕೆಳಗೆ ಬಿದ್ದ ಪರಿಣಾಮ ಅಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಶಾರದಾ ಕ್ಯಾರಕಟ್ಟಿ ಎಂಬ ಮಹಿಳೆ ಕೂಡ ಇದ್ದಾರೆ. ಶಾರದಾ ಅವರು ಹುಬ್ಬಳ್ಳಿ ಗಂಗಾಧರ ನಗರದ ಸೆಟಲ್‌ಮೆಂಟ್ ಬಡಾವಣೆಯ ನಿವಾಸಿಯಾಗಿದ್ದು, ಮನೆ ಪಡೆಯಲು ಮಗ ಶಶಿಕಾಂತ ಜೊತೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದರು.
ಕಟೌಟ್ ಬೀಳುವ ಸಂದರ್ಭದಲ್ಲಿ ಮಗ ಶಶಿಕಾಂತ್ ತಪ್ಪಿಸಿಕೊಂಡಿದ್ದು, ತಾಯಿ ಶಾರದಾ ಮೇಲೆ ಕಟೌಟ್ ಬಿದ್ದು ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದೊಡ್ಡ ಕಟೌಟ್ ಅಳವಡಿಸುವ ವೇಳೆ ಸುರಕ್ಷತಾ ಕ್ರಮ ಪಾಲನೆಯಿಲ್ಲದ ಬಗ್ಗೆ ಟೀಕೆ ವ್ಯಕ್ತವಾಗಿದೆ.



