ಹುಬ್ಬಳ್ಳಿ: ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 24 ಗಂಟೆಗಳ ಒಳಗಾಗಿ ಒಟ್ಟು ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಫಕೀರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮತ್ತು ಗುರಸಿದ್ದಗೌಡ ಪಾಟೀಲ್ ಎಂಬ ಮೂವರು ಇನಾಂ ವೀರಪುರ ಗ್ರಾಮದವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಮೃತ ಯುವತಿಯ ತಂದೆಯೂ ಒಬ್ಬರಾಗಿದ್ದಾರೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಗಳನ್ನು ಸ್ವಂತ ತಂದೆ ಹಾಗೂ ಆತನ ಕುಟುಂಬದ ಸದಸ್ಯರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಭಾನುವಾರ ನಡೆದಿತ್ತು.
ಈ ಪ್ರಕರಣದಲ್ಲಿ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಪೈಕಿ ಇಡೀ ಕುಟುಂಬ ಜೈಲು ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಅತ್ತ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ರೇಣವ್ವಳ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಐವರಿಗೆ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಘಟನೆ ಹಿನ್ನೆಲೆಯಲ್ಲಿ ಮಾನ್ಯಾಳ ಗಂಡ ವಿವೇಕಾನಂದ ಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಓರ್ವ ಗನ್ ಮ್ಯಾನ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಮಾನ್ಯಾ ಮತ್ತು ವಿವೇಕಾನಂದ ಇಬ್ಬರೂ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ ಇನ್ಸ್ಟಾಗ್ರಾಂ ಮೆಸೆಜ್ನಿಂದ ಪ್ರೀತಿ ಹುಟ್ಟಿತ್ತು. ಈ ವಿಚಾರ ಎರಡೂ ಕುಟುಂಬಕ್ಕೂ ತಿಳಿದಿತ್ತು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು.
ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದನನ್ನು ಬಿಟ್ಟು ಬದುಕೋದಿಲ್ಲ ಅಂತ ಹಠ ಹಿಡಿದಿದ್ದಳಂತೆ. ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂ.19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರು ಎನ್ನಲಾಗಿದೆ.
ಸಂತ್ರಸ್ಥೆ ಮಾನ್ಯ ಪಾಟೀಲ್ ಆಕೆಯ ತಂದೆಯ ಮುದ್ದಿನ ಮಗಳಾಗಿದ್ದಳು. ಮಗಳನ್ನು ಇಂಜಿನೀಯರ್ ಮಾಡಿ ಅಮೇರಿಕಕ್ಕೆ ಕಳುಹಿಸೋ ಚಿಂತನೆ ತಂದೆಯದಾಗಿತ್ತು. ಆದ್ರೆ ಮುದ್ದಿನ ಮಗಳು ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು. ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.
ಮಾನ್ಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದಳು, ವಿವೇಕಾನಂದ ದಲಿತ ಸಮುದಾಯದವನಾಗಿದ್ದ. ಜಾತಿ ದ್ವೇಷದಿಂದ ಕುಪಿತರಾದ ಮಾನ್ಯ ತಂದೆ ಪ್ರಕಾಶ್ ಗೌಡ ಪಾಟೀಲ್ ಮತ್ತು ಸಂಬಂಧಿಕರು ಗರ್ಭಿಣಿ ಮಗಳನ್ನೇ ಹೊಡೆದು ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕೃತ್ಯಕ್ಕೆ ಕುಟುಂಬದ ಹಲವು ಸದಸ್ಯರು ಸಹಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



