ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಬೃಹತ್ ಕಬ್ಬಿಣದ ಶೀಟ್‌ವೊಂದು ಏಕಾಏಕಿ ನೆಲಕ್ಕೆ ಬಿದ್ದ ಘಟನೆ ನಡೆದಿದೆ.
ಮಾರತ್‌ಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಡರಾತ್ರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ ಬೃಹತ್ ಕಬ್ಬಿಣದ ಶೀಟ್ ಏಕಾಏಕಿ ರಸ್ತೆಗೆ ಬಿದ್ದಿದೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನಗಳು ಅಥವಾ ಬೈಕ್ ಸವಾರರು ಸಂಚರಿಸದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಕಬ್ಬಿಣದ ಶೀಟ್ ರಸ್ತೆಗೆ ಬೀಳುವ ದೃಶ್ಯ ಕಾರೊಂದರ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶೀಟ್ ಬಿದ್ದ ರಭಸಕ್ಕೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಗಲಿನ ವೇಳೆಯಲ್ಲಿ ಇದೇ ಘಟನೆ ಸಂಭವಿಸಿದ್ದರೆ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಹೀಗಾಗಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಘಟನೆಯಿಂದ ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.



