ಬೆಳಗಾವಿ: ಲೋಕಭವನದಲ್ಲಿ ನಡೆದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಂಭಾಪುರಿ ಪೀಠದ ಶ್ರೀ ವೀರಗಂಗಾಧರ ಜಗದ್ಗುರುಗಳ ಭಾವಚಿತ್ರಕ್ಕೆ ನಮಸ್ಕರಿಸಿ, ಎಲ್ಲಾ ಧರ್ಮಗಳ ಗುರುಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಸಂತಸದ ಸಂಗತಿ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಮಠದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗೌರವ ಶ್ರೀರಕ್ಷೆ ನೀಡಿ ಆಶೀರ್ವಾದ ಮಾಡಿದ ಶ್ರೀಗಳು, ಇದು ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಟ ಕ್ಷಣವಾಗಿದೆ ಎಂದು ಹೇಳಿದರು. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಧರ್ಮದ ಗುರುಗಳ ಸಮ್ಮುಖದಲ್ಲಿ ಪ್ರಮಾಣ ವಚನ ನಡೆದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸತೀಶ್ ಜಾರಕಿಹೊಳಿ ಅವರು ಸಚಿವ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಶ್ರೀಗಳು, ಬಹುದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಇನ್ನಷ್ಟು ಸಚಿವ ಸ್ಥಾನಗಳು ದೊರೆಯಲಿ ಎಂದು ಶುಭ ಹಾರೈಸಿದರು.



