ಶಿವಮೊಗ್ಗ: ಜಿಲ್ಲೆಯ ಹುಲಿಕಲ್ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟ ಮೂರನೇ ಕಾರ್ಮಿಕನ ಶವ ಇಂದು ಮುಂಜಾನೆ ಪತ್ತೆಯಾಗಿದೆ.
ಇದರೊಂದಿಗೆ ಅವಘಡದಲ್ಲಿ ಸಾವನ್ನಪ್ಪಿದ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾದಂತಾಗಿದೆ.
ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಕಾರ್ಮಿಕ ಶಬ್ಬೀರ್ (40) ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಹುಲಿಕಲ್ ಘಾಟ್ನ ಹೇರ್ ಪಿನ್ ಕ್ರಾಸ್ ಬಳಿ ಕಾಂಕ್ರೀಟ್ ಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಭೂ ಕುಸಿತ ಸಂಭವಿಸಿ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು.
ಈ ಅವಘಡದಲ್ಲಿ ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37) ಹಾಗೂ ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಸ್ಥಳದಲ್ಲೇ ಮೃತಪಟ್ಟಿದ್ದರು. ಇವರಿಬ್ಬರ ಮೃತದೇಹಗಳನ್ನು ನಿನ್ನೆ ಪತ್ತೆ ಮಾಡಲಾಗಿತ್ತು.
ಮೂರು ಮೃತದೇಹಗಳನ್ನು ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನಾ ಸ್ಥಳದಲ್ಲಿ ಎಸ್ಡಿಆರ್ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದ ರಕ್ಷಣಾ ಕಾರ್ಯ ಇದೀಗ ಪೂರ್ಣಗೊಂಡಿದೆ. ದುರಂತದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



