ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾನವರ ಕಲ್ಯಾಣವನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಜಗತ್ತಿನ ಎಲ್ಲ ಜೀವರಾಶಿಗಳು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂಬ ಸಂದೇಶ ಸಾರಿದ ಏಕೈಕ ವ್ಯಕ್ತಿ ಏಸು ಕ್ರಿಸ್ತರಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಪಟ್ಟಣದ ಮುಕ್ತಿನಗರದಲ್ಲಿರುವ ಬ್ಲೆಸಿಂಗ್ ಗಾಸ್ಪೆಲ್ ಪ್ರೇಯರ್ ಚರ್ಚ್‌ನಲ್ಲಿ ಗುರುವಾರ ಕ್ರಿಸ್‌ಮಸ್ ಅಂಗವಾಗಿ ಏಸು ಕ್ರಿಸ್ತನ ಜನ್ಮದಿನವನ್ನು ಕೇಕ್ ಕತ್ತರಿಸಿ ಶುಭಕೋರಿ ಮಾತನಾಡಿದರು.
ಜಗತ್ತಿನಲ್ಲಿ ವಾಸ ಮಾಡುತ್ತಿರುವ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದೇ ನಿಜವಾದ ಧರ್ಮ. ದೇವನೊಬ್ಬ ನಾಮ ಹಲವು ಎನ್ನುವಂತೆ ಏಸುಕ್ರಿಸ್ತ ಕೂಡಾ ದೇವರ ಅವತಾರವಾಗಿದ್ದಾರೆ. ನೊಂದ, ಎಲ್ಲರಿಂದ ನಿರ್ಲಕ್ಷಿಸಲ್ಪಟ್ಟ, ರೋಗರುಜಿನಗಳಿಗೆ ಒಳಗಾಗಿರುವ ಎಲ್ಲರನ್ನು ನನ್ನ ಭಕ್ತರು ಎಂದು ಏಸುಕ್ರಿಸ್ತರು ಹೇಳಿದ್ದರು. ಅವರು ಸಮಾಜಕ್ಕೆ ಕೊಟ್ಟ ಸಂದೇಶಗಳು ಶ್ರೇಷ್ಠವಾಗಿದ್ದು, ಎಲ್ಲರೂ ನನ್ನವರೆಂಬ ಭಾವ ಬೆಳೆಸಿಕೊಳ್ಳುವಂತೆ ಅವರು ಉತ್ತಮ ಸಂದೇಶ ಸಾರಿದ್ದರು ಎಂದು ಹೇಳಿದರು.
ಚರ್ಚ್ನ ಫಾದರ್ ರೆ. ಜಿ.ಎಂ.ನಾಯಕ್ ಮಾತನಾಡಿ, ಏಸುಕ್ರಿಸ್ತನ ಸಂದೇಶಗಳು ಸರ್ವರಿಗೂ ಏಳಿಗೆಯನ್ನು ಬಯಸುವವಾಗಿವೆ. ಬಡವ, ಬಲ್ಲಿದ, ಜಾತಿ, ವಿಜಾತಿ ಯಾವುದನ್ನೂ ನೋಡದೆ ಮನುಷ್ಯನನ್ನಾಗಿ ನೋಡು ಎನ್ನುವ ತತ್ವವನ್ನು ಇಡೀ ಜಗತ್ತಿಗೆ ಏಸುಕ್ರಿಸ್ತರು ತೋರಿಸಿಕೊಟ್ಟಿದ್ದಾರೆ. ಎಲ್ಲ ಧರ್ಮಗಳು ಒಳ್ಳೆಯದನ್ನು ಬಯಸುವಂತೆ ಹೇಳುತ್ತವೆ, ನಮ್ಮ ನೆರಹೊರೆಯ ಪರಸ್ಪರರನ್ನು ಪ್ರೀತಿಸದ ಹೊರತು ಮನುಕುಲದ ಉದ್ಧಾರ ಸಾಧ್ಯವಿಲ್ಲ ಎಂಬುದು ಏಸುಕ್ರಿಸ್ತನ ನುಡಿಯಾಗಿತ್ತು ಎಂದರು.
ಈ ಸಂದರ್ಭದಲ್ಲಿ ಯಶೋಧಾ ನಾಯಕ್, ರಾಮಪ್ಪ ಗಡದವರ, ವಿಜಯ ಕರಡಿ, ಈರಣ್ಣ ಅಂಕಲಕೋಟಿ, ಎಂ.ಕೆ. ಕಳ್ಳಿಮಠ ದಂಪತಿಗಳು, ಡಿ.ಎಂ. ಪೂಜಾರ, ಪ್ರೀತಂ ಮತ್ತು ಪ್ರವೀಣ ಸೇರಿದಂತೆ ಅನೇಕರು ಇದ್ದರು. ವಿವಿಧ ಭಾಗಗಳಿಂದ ನೂರಾರು ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಟ್ಟೆ, ಸಿಹಿ ತಿನಿಸು ಇತ್ಯಾದಿಗಳನ್ನು ವಿತರಿಸಲಾಯಿತು.



