ಬೆಂಗಳೂರು: ಸರಣಿ ಅತ್ಯಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಂಬಂಧ ಇದೀಗ ನ್ಯಾಯಾಲಯದಲ್ಲಿ ತೀವ್ರ ಸ್ವರೂಪದ ವಾದ-ಪ್ರತಿವಾದ ನಡೆದಿದೆ.
ವಾದ ಆಲಿಸಿದ ನಂತರ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ಹ 2.45ಕ್ಕೆ ಪ್ರಕಟಿಸುವುದಾಗಿ ತಿಳಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿಎನ್ ಜಗದೀಶ್ ಅವರು ವಾದ ಮಂಡನೆ ಮಾಡಿದರೆ, ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲೆ ನಳಿನಿ ಮಾಯೇಗೌಡ ವಾದ ಮಂಡಿಸಿದರು.
ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ರೇವಣ್ಣ, ನಾನು ಹಲವು ಮಹಿಳೆಯರೊಂದಿಗೆ ಇಂತಹ ಕೃತ್ಯ ನಡೆಸಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಸಂಸದನಾಗಿದ್ದ ವೇಳೆ ಯಾರೂ ಇಂತಹ ಆರೋಪ ಮಾಡಿರಲಿಲ್ಲ. ನಾನು ರೇಪ್ ಮಾಡಿದ್ದರೆ ಅವರು ಯಾರಿಗೂ ಏಕೆ ಹೇಳಿರಲಿಲ್ಲ?
ಚುನಾವಣೆ ಸಮಯದಲ್ಲಿಯೇ ಅವರು ಯಾಕೆ ಹಾಗೆ ಮಾಡಿದ್ದಾರೆ? ಪೊಲೀಸರೇ ಈ ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ಈ ರೀತಿ ಮಾಡಿದ್ದಾರೆ. ನಾನು ಯಾವುದೇ ಅಪರಾಧ ಎಸಗಿಲ್ಲ, ನಾನು ಮಾಡಿದ್ದ ಒಂದೇ ತಪ್ಪು ಅಂದರೆ, ರಾಜಕೀಯದಲ್ಲಿ ಬೇಗ ಬೆಳೆದದ್ದು ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ.