ನವದೆಹಲಿ: ನಾನು ರಾಜಕೀಯದಿಂದ ನಾಪತ್ತೆಯಾಗಿಲ್ಲ. ಎಲ್ಲರೂ ಸೇರಿ ನನ್ನನ್ನು ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಿದ್ದರು. ಈಗ ನಿಧಾನವಾಗಿ ಅವುಗಳಿಂದ ಹೊರಬರುತ್ತಿದ್ದೇನೆ. ರಾಜಕೀಯ ನನ್ನ ರಕ್ತದಲ್ಲಿದೆ. ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸಕ್ರಿಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ಚಿಕ್ಕಪ್ಪ–ದೊಡ್ಡಪ್ಪರ ಮೂಲಕ ರಾಜಕೀಯಕ್ಕೆ ಬಂದವನಲ್ಲ.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ರಾಜಕೀಯವಾಗಿ ಮತ್ತೆ ಸಕ್ರಿಯವಾಗುತ್ತಿದ್ದೇನೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಸೂಕ್ತ ಸಮಯದಲ್ಲಿ ಹೇಳುತ್ತೇನೆ. ನಾನು ಮನೆಯಲ್ಲಿ ಮಲಗಿರುವವನಲ್ಲ, ರಾಜಕೀಯಕ್ಕೆ ಮರಳುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ದೇಶದಾದ್ಯಂತ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ‘ಇಂಡಿಯನ್ ಮುಸ್ಲಿಂ ಫಾರ್ ಪ್ರೋಗ್ರೆಸ್ ಅಂಡ್ ರಿಫಾರ್ಮ್ಸ್’ ಸಂಘಟನೆಯ ವತಿಯಿಂದ ದೇಶದ ಪ್ರಮುಖ ಮುಸ್ಲಿಂ ನಾಯಕರ ನಿಯೋಗವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಉತ್ತರಾಖಂಡ, ಅಸ್ಸಾಂ ಹಾಗೂ ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಸ್ಸಾಂ ಮುಖ್ಯಮಂತ್ರಿ ಮುಸ್ಲಿಮರತ್ತ ಗನ್ ತೋರಿಸುವ ಹೇಳಿಕೆ ನೀಡುತ್ತಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಹಾಗೂ ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.



